ಮೈಸೂರು: ವಿಶ್ವ ಅಲ್ಜೈಮರ್ಸ್ ತಿಂಗಳ ಅಂಗವಾಗಿ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಶಾಖೆ ಜಾಗೃತಿ ಟ್ರಕ್ಕಿಂಗ್ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ ಮತ್ತು ವಿವೇಕ ಆಸ್ಪತ್ರೆ ಸಹಯೋಗದಲ್ಲಿ ಚಾಮುಂಡಿ ಬೆಟ್ಟದ ಪಾದದಿಂದ ಮೇಲ್ಭಾಗದವರೆಗೆ ನಮ್ಮ ನಡಿಗೆ ಆರೋಗ್ಯದೆಡೆಗೆ ಘೋಷವಾಕ್ಯದೊಂದಿಗೆ ಜಾಗೃತಿ ಟ್ರೆಕ್ಕಿಂಗ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಅಲ್ಜೈಮರ್ಸ್ ಸೇರಿದಂತೆ ಸ್ಮರಣಶಕ್ತಿ ಸಂಬಂಧಿತ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ
ಎಂದು ಹೇಳಿದರು.
ಅನೇಕರಿಗೆ ಈ ಕಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದಿಲ್ಲ, ಸ್ಮರಣಶಕ್ತಿ ಕುಂಠಿತವಾಗುವುದನ್ನು ಸಾಮಾನ್ಯ ವಯೋಸಹಜ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷಿಸುವುದರಿಂದ ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಜೈಮರ್ಸ್ ಗೆ ಸಂಪೂರ್ಣ ಗುಣಪಡಿಸುವ ಚಿಕಿತ್ಸೆ ಸೀಮಿತವಾಗಿರುವುದರಿಂದ ಆರಂಭಿಕ ಹಂತದಲ್ಲೇ ಗುರುತಿಸುವುದು ಮುಖ್ಯ ಎಂದು ತಿಳಿಸಿದರು.
ಎಆರ್ಡಿಎಸ್ಐ ಮೈಸೂರು ಶಾಖೆ ಅಧ್ಯಕ್ಷ ಹಾಗೂ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಮಾತನಾಡಿ, ಅಲ್ಜೈಮರ್ಸ್ ನಿರ್ವಹಣೆಯಲ್ಲಿ ಜಾಗೃತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ಕೆಲವು ಔಷಧಿಗಳು ಲಭ್ಯವಿದ್ದರೂ ಅವುಗಳ ಪರಿಣಾಮ ಸೀಮಿತವಾಗಿದ್ದು ಅಡ್ಡಪರಿಣಾಮಗಳೂ ಇವೆ. ಹೀಗಾಗಿ ಔಷಧ ಚಿಕಿತ್ಸೆ ಜೊತೆಗೆ ಕಾಯಿಲೆಯ ಲಕ್ಷಣಗಳು, ಆರಂಭಿಕ ಪತ್ತೆ ಮತ್ತು ರೋಗಿಗಳ ಆರೈಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ವಾಕಥಾನ್, ಟ್ರೆಕ್ಕಿಂಗ್, ಜಾಗೃತಿ ಸಭೆಗಳು ಮತ್ತು ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಅಲ್ಜೈಮರ್ಸ್ ಕುರಿತು ನಿರಂತರ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮತ್ತು ವಿಶೇಷವಾಗಿ ಸ್ಮರಣಶಕ್ತಿ ತಪಾಸಣಾ ಪರೀಕ್ಷೆಗಳನ್ನು ನಡೆಸಲಾಯಿತು. ಇದರ ಮೂಲಕ ಸ್ಮರಣಶಕ್ತಿ ಸಮಸ್ಯೆ ಇದೆಯೇ ಎಂಬುದನ್ನು ಪ್ರಾಥಮಿಕವಾಗಿ ತಿಳಿದು ಅಗತ್ಯವಿದ್ದಲ್ಲಿ ವೈದ್ಯಕೀಯ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಮೈಸೂರು ಕಾರ್ಯದರ್ಶಿ ಸಮೀರ್ ಕಶ್ಯಪ್, ಶಾರದಾ ವಿಲಾಸ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಗೌರವ ಕಾರ್ಯದರ್ಶಿ ಆರ್.ದಿನೇಶ್, ವಿವೇಕ ಆಸ್ಪತ್ರೆ ಪ್ರತಿನಿಧಿಗಳು, ಇನ್ನರ್ ವೀಲ್ ಅಧ್ಯಕ್ಷೆ ಚೈತ್ರ ಅರುಣ್, ವಿವೇಕ ಚೇತನ್ಯ ಫೌಂಡೇಶನ್ ನ ಅರುಣ್ ಕುಮಾರ್, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
