ಮೈಸೂರು: ಮೈಸೂರು ಮೃಗಾಲಯದ ಪಕ್ಕದಲ್ಲಿರುವ ಅವೈಜ್ಞಾನಿಕ ವಾಟರ್ ಪಾರ್ಕ್ ಅನ್ನು ತಕ್ಷಣವೇ ತೆರವುಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಕ್ರಾಂತಿದಳ ವತಿಯಿಂದ ಮನವಿ ಸಲ್ಲಿಸಲಾಯಿತು.
ಕನ್ನಡ ಕ್ರಾಂತಿದಳ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಹಿತ್ ಅರಸ್ ಮತ್ತಿತರರು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಹಶೀಲ್ದಾರ್ ಕಚೇರಿಯ ಎಸ್ ಶಿವ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.
ವಿಶ್ವಪ್ರಸಿದ್ಧ ಮೈಸೂರು ಚಾಮರಾಜೇಂದ್ರ ಮೃಗಾಲಯವು ಸಾವಿರಾರು ದೇಶ-ವಿದೇಶಿ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಆದರೆ, ಅತ್ಯಂತ ವಿಷಾದದ ಸಂಗತಿಯೆಂದರೆ, ಈ ಮೃಗಾಲಯದ ಪಕ್ಕದಲ್ಲೇ ಅವೈಜ್ಞಾನಿಕವಾಗಿ ವಾಟರ್ ಪಾರ್ಕ್ ನಿರ್ಮಿಸಲಾಗಿದೆ. ಈ ವಾಟರ್ ಪಾರ್ಕ್ನಿಂದಾಗಿ ಮೃಗಾಲಯದ ಮೂಕ ಜೀವಿಗಳಿಗೆ ತೀವ್ರ ಸ್ವರೂಪದ ತೊಂದರೆಗಳು ಉಂಟಾಗುತ್ತಿವೆ ಎಂದು ಕನ್ನಡ ಕ್ರಾಂತಿದಳ ಮೈಸೂರು ಜಿಲ್ಲಾ ಘಟಕ ವತಿಯಿಂದ
ಆಕ್ರೋಶ ವ್ಯಕ್ತಪಡಿಸಿ ಮನವಿ ಸಲ್ಲಿಸಲಾಗಿದೆ.
ಶಬ್ದ ಮಾಲಿನ್ಯ: ವಾಟರ್ ಪಾರ್ಕ್ನಲ್ಲಿ ಬಳಸಲಾಗುವ ದೊಡ್ಡ ಧ್ವನಿವರ್ಧಕಗಳು, ಪ್ರವಾಸಿಗರ ಜೋರು ಕಿರುಚಾಟ ಮತ್ತು ಯಂತ್ರಗಳ ಸದ್ದು ಮೃಗಾಲಯದ ಪ್ರಾಣಿ ಹಾಗೂ ಪಕ್ಷಿಗಳಲ್ಲಿ ತೀವ್ರ ಭಯ, ಒತ್ತಡ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತಿದೆ.
ನೈಸರ್ಗಿಕ ವಾತಾವರಣಕ್ಕೆ ಧಕ್ಕೆ: ಪ್ರಾಣಿಗಳಿಗೆ ಪ್ರಶಾಂತವಾದ ವಾತಾವರಣದ ಅಗತ್ಯವಿರುತ್ತದೆ. ಆದರೆ ಪಕ್ಕದಲ್ಲೇ ಈ ವಾಣಿಜ್ಯ ಚಟುವಟಿಕೆಯಿಂದಾಗಿ ಅವುಗಳ ನೈಸರ್ಗಿಕ ಜೀವನ ಶೈಲಿಗೆ ಭಂಗ ಬರುತ್ತಿದೆ.
ರೋಗಭೀತಿ ಮತ್ತು ತ್ಯಾಜ್ಯ: ವಾಟರ್ ಪಾರ್ಕ್ನಿಂದ ಹೊರಬರುವ ರಾಸಾಯನಿಕಯುಕ್ತ ನೀರು ಮತ್ತು ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳು ಮೃಗಾಲಯದ ಪರಿಸರವನ್ನು ಕಲುಷಿತಗೊಳಿಸುವ ಆತಂಕ ಎದುರಾಗಿದೆ.
ಮೂಕ ಪ್ರಾಣಿಗಳ ಪರವಾಗಿ ಧ್ವನಿ ಎತ್ತುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ವಾಟರ್ ಪಾರ್ಕ್ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಸಂಪೂರ್ಣ ಅವೈಜ್ಞಾನಿಕ ಹಾಗೂ ನಿಯಮಬಾಹಿರವಾಗಿದೆ.
ಆದ್ದರಿಂದ, ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೃಗಾಲಯದ ಅಮೂಲ್ಯ ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಅವೈಜ್ಞಾನಿಕ ವಾಟರ್ ಪಾರ್ಕ್ ಅನ್ನು ತಕ್ಷಣವೇ ತೆರವುಗೊಳಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಕ್ರಾಂತಿದಳದ ಪರವಾಗಿ ವಿನಂತಿಸಿಕೊಳ್ಳುತ್ತೇವೆ
ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಲೋಹಿತ್ ಅರಸ್ ತಿಳಿಸಿದ್ದಾರೆ.
