ಮೈಸೂರು: ಮುಂದಿನ ನಾಯಕತ್ವವನ್ನು ಹೊರುವ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಪಾತ್ರ ಅಪಾರವಾಗಿದ್ದು, ಮುಂದಿನ ವರ್ಷದಿಂದ ತಾಲ್ಲೂಕಿನಲ್ಲಿ ಮೂರು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ ಹಾಲ್ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಮೈಸೂರು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶವನ್ನು ಹೆಚ್ಚಿಸುವ ಜೊತೆಗೆ ಮೈಸೂರು ತಾಲ್ಲೂಕನ್ನು ಮೊದಲನೇ ಸ್ಥಾನಕ್ಕೆ ತರಬೇಕು ಎಂದು ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ವನ, ಶೌಚಾಲಯ ಮತ್ತು ಶುಚಿತ್ವವನ್ನು ಕಾಪಾಡಿಕೊಂಡು ಬಂದಿರುವ ಶಾಲೆಗಳಿಗೆ ಪ್ರಶಂಸನಾ ಪುರಸ್ಕಾರ, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರು ಸಿಗುವಂತೆ ಮಾಡುವುದು ಹಾಗೂ ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಯಾವ ಯಾವ ರೀತಿಯ ಸಂಗೀತ, ಕಲೆಗಳನ್ನು ಕಲಿಸಲಾಗಿದೆ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸಲು ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಭಾರತದಾದ್ಯಂತ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಇಂದಿನ ಮಕ್ಕಳಿಗೆ ದಾರಿದೀಪವಾಗಬೇಕು. ಶಿಕ್ಷಕರ ದಿನಾಚರಣೆ ನಿಮ್ಮ ಕಾರ್ಯಕ್ರಮ ಎನ್ನುವಂತಾಗಬೇಕು. ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಇಂದು ಒಂದಲ್ಲ ಒಂದು ವಿಚಾರಕ್ಕೆ ಭ್ರಷ್ಟಾಚಾರ, ಜಾತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಭ್ರಷ್ಟಾಚಾರ ಇಲ್ಲದ ಕ್ಷೇತ್ರ ಉಪಾಧ್ಯಾಯ ಮತ್ತು ಶಿಕ್ಷಣ ಕ್ಷೇತ್ರವಾಗಿದೆ. ಉತ್ತಮ ಪ್ರಜೆಗಳು, ಸೈನಿಕರು, ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್ಗಳನ್ನು ಕೊಡುವವರು ನೀವು ಎಂದು ಕೊಂಡಾಡಿದರು.
ಶಿಕ್ಷಕರಿಗೆ ಒತ್ತಡ ಬೀಳುತ್ತಿರುವುದು ನಿಜ. ನನ್ನದು ಬಡ ಕುಟುಂಬ. ಶ್ರಮದ ಫಲವಾಗಿ ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದಿಂದ ನನ್ನನ್ನು ತೆಗೆಯಬೇಕು ಎಂಬ ಕಾರಣಕ್ಕಾಗಿ ಆರು ತಿಂಗಳಿಂದ ಕೆಲವರು ಇಡೀ ರಾಜ್ಯವನ್ನು ಸುತ್ತಿದ್ದಾರೆ. 44 ಸಾವಿರ ಸಂಘಗಳಿಗೆ ಮಹಾಮಂಡಲ ಮಾತೃಸಂಸ್ಥೆಯಾಗಿದೆ. ಈ ಬಗ್ಗೆ ಗೊತ್ತಿರದ ವ್ಯಕ್ತಿಗಳು ಪದವಿ ಮೇಲೆ ಕಣ್ಣು ಹಾಕಿದ್ದರು ಎಂದು ಇದೇ ವೇಳೆ ಜಿಟಿಡಿ ಆರೋಪಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಉದಯಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಸ್ಪರ್ಧಾತ್ಮಕವಾಗಿರುವ ಕೃತಕ ಬುದ್ಧಿಮತ್ತೆ (ಎಐ) ಎದುರಿಸಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಸುಧಾರಿಸಬೇಕು. ಹೊಸತನ ಅಳವಡಿಸಿಕೊಂಡು ಬೋಧನೆ ಮಾಡಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೈಸೂರು ತಾಲ್ಲೂಕು ಮೊದಲ ಸ್ಥಾನ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಕುಮಾರ್,ಜಿ.ಪಂ. ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ 86 ಶಿಕ್ಷಕರನ್ನು ಗೌರವಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಶೇ.100ರಷ್ಟು ಫಲಿತಾಂಶ ತಂದುಕೊಟ್ಟ ಶಾಲೆಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ಸಮಾಜ ಸೇವಕ ನಾಗರಾಜು ವಿ.ಭೈರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅರುಣ್ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಲಂಗಿ ಸುರೇಶ್, ಸೋಮೇಗೌಡ ಮತ್ತಿತರರು ಹಾಜರಿದ್ದರು.
