ಮೈಸೂರು: ಮೈಸೂರು ಹಾಗೂ ಕೊಡಗು ಭಾಗಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆಗೆ ಪೂರಕವಾಗಿ ನಾವು ಇನ್ನೂ ಕೆಲಸ ಮಾಡಬೇಕಿದೆ ಎಂದು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಯದುವೀರ್,ಮೋದಿಯವರ ಕಲ್ಪನೆಯಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ. ಮೋದಿಯವರ ವಿಕಸಿತ ಭಾರತದ ಕಲ್ಪನೆಯ ಜೊತೆಗೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಮೇಲೆ ನಾನು ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತೇನೆ. ಸದ್ಯ ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಿರುವ ತೃಪ್ತಿ ಇದೆ ಎಂದು ಹೇಳಿದರು.
ರಾಜಕೀಯದಲ್ಲಿ ಕೆಲ ನಾಯಕರು ಇಷ್ಟವಾಗುತ್ತಾರೆ. ಅದು ಸ್ವಪಕ್ಷವಾಗಲಿ ಅಥವಾ ವಿಪಕ್ಷವಾಗಲಿ. ನಮ್ಮಂತ ಸಣ್ಣ ಸಮುದಾಯದಿಂದ ಬಂದ ದೇವರಾಜ ಅರಸು ಅವರು ಎಲ್ಲರೂ ಒಪ್ಪುವ ಆಡಳಿತ ನೀಡಿದ್ದರು. ಸಿದ್ದರಾಮಯ್ಯ ಕೂಡ ರಾಜಕೀಯವಾಗಿ ಒಳ್ಳೆಯ ನಾಯಕರು. ಇಂತಹ ನಾಯಕರುಗಳು ಇಷ್ಟ ಆಗುತ್ತಾರೆ. ರಾಜಕೀಯವೇ ಬೇರೆ, ವೈಯಕ್ತಿಕ ಅಭಿಪ್ರಾಯಗಳೇ ಬೇರೆ ಎಂದು ಪ್ರಶ್ನೆಯೊಂದಕ್ಕೆ ಸಂಸದರು ಉತ್ತರಿಸಿದರು.
ಕಂಬಳ ಕರಾವಳಿ ಭಾಗದ ಸುಂದರ ಕ್ರೀಡೆ,ಅದಕ್ಕೆ ಅದರದ್ದೇ ಆದ ಸಂಪ್ರದಾಯ,ವೈಶಿಷ್ಟ್ಯ ಇದೆ. ಕಂಬಳ ಕ್ರೀಡೆಗೆ ನಮ್ಮ ವಿರೋಧವಿಲ್ಲ,ಆದರೆ
ಅದನ್ನು ದಸರಾ ಸಂದರ್ಭದಲ್ಲಿ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ಯದುವೀರ್ ಅಭಿಪ್ರಾಯ ಪಟ್ಟರು.
ಸಂವಿಧಾನದಲ್ಲಿ ಎಲ್ಲರಿಗೂ ಅವರದ್ದೆ ಆದ ಧಾರ್ಮಿಕ ಹಕ್ಕು ಇದ್ದು ಇತರರ ಭಾವನೆಗಳಿಗೆ ಧಕ್ಕೆಯಾಗದಂತೆ ಯಾವುದೇ ಆಚರಣೆ ಬೇಕಾದರೂ ಮಾಡಬಹುದು. ಆದರೆ, ಮಹಿಷ ದಸರಾ ವಿಚಾರದಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಸುವುದು ಬೇಡ ಎನ್ನುವುದು ನಮ್ಮ ಸ್ಪಷ್ಟ ನಿಲುವು. ಕೇವಲ ಆಚರಣೆ ಆಗಿದ್ದರೆ ಯಾರ ಭಾವನೆಗೂ ಧಕ್ಕೆಯಾಗದಂತೆ ಆಚರಣೆ ಮಾಡಲಿ, ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಮಹಿಷ ದಸರಾ ಆಚರಣೆಯ ಹಿಂದಿರುವ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸಂಸದರು ಹೇಳಿದರು.
