ಮೈಸೂರು: ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳ ಮರುಪರಿಶೀಲನೆ ಸಂಬಂಧ ಅಂಗನವಾಡಿ ಕಾರ್ಯಕರ್ತೆಯರಿಗೆ ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಹುಣಸೂರು ಬಸವಣ್ಣ ಮಾತನಾಡಿ, ಗೃಹಲಕ್ಷ್ಮಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಯಾವುದೇ ಅರ್ಹ ಫಲಾನುಭವಿ ಯೋಜನೆಯಿಂದ ವಂಚಿತರಾಗಬಾರದು. ಮನೆ ಮನೆಗೆ ತೆರಳಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೂರು ಹಂತಗಳಲ್ಲಿ ಸುಮಾರು 340 ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಯಿತು. ತರಬೇತಿ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಪಡಿತರ ಚೀಟಿ ಹೊಂದಿರುವ ಮಹಿಳೆಯರ ಮನೆಗಳಿಗೆ ಕಾರ್ಯಕರ್ತೆಯರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನವೀನ್ ಮಾತನಾಡಿ, ಗೃಹಲಕ್ಷ್ಮಿ ಹಣ ಹಲವು ಕುಟುಂಬಗಳ ನಿರ್ವಹಣೆಗೆ ಆಧಾರವಾಗಿದೆ ಎಂದು ಹೇಳಿದರು.
ಎಸ್. ಮೇಗಡಹಳ್ಳಿಯ ಮಹದೇವಮ್ಮ ಅವರು ಯೋಜನೆಯ ಹಣದಿಂದ 4 ಮೇಕೆಗಳನ್ನು ಖರೀದಿಸಿ ಜೀವನೋಪಾಯ ಕಂಡುಕೊಂಡಿದ್ದಾರೆ. ಆರ್.ಪಿ. ಹುಂಡಿಯ ಸಾವಿತ್ರಿ ಟೈಲರಿಂಗ್ ಯಂತ್ರ ಖರೀದಿಸಿ ಸ್ವಾವಲಂಬಿಯಾಗಿದ್ದಾರೆ. ಕಲಿಯೂರು ಗ್ರಾಮದ ಕವಿತಾ ಅವರು ಹಸು ಖರೀದಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಂಗಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋವಿಂದರಾಜು, ಸಂರಕ್ಷಣಾಧಿಕಾರಿ ಶಾರದಾದೇವಿ, ಮಹಿಳಾ ಮೇಲ್ವಿಚಾರಕರಾದ ಸುಗಂಧ, ಭೀಮವ್ವ ದಂಡಿನ, ಗಿರೀಶ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
