ಮೈಸೂರು: ಕಬಿನಿ ಜಲಾಶಯದಿಂದ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಬಿನಿ ಅಚ್ಚುಕಟ್ಟು ಭಾಗದ ರೈತರು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಗನ್ ಹೌಸ್ ಸರ್ಕಲ್ ಬಳಿ ಜಮಾಯಿಸಿ, ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್,ಕಬಿನಿ ಜಲಾಶಯ ಎರಡು ತಿಂಗಳ ಹಿಂದೆ ಭರ್ತಿಯಾಗಿದೆ,ಆದರೆ ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿಗಳ ಸ್ನೇಹಕ್ಕಾಗಿ ನೀರನ್ನು ಹರಿಸಿ ಜಲಾಶಯವನ್ನು ಖಾಲಿ ಮಾಡಿ ಕಾವೇರಿ ಅಚ್ಚುಕಟ್ಟು ರೈತರನ್ನು ಬಲಿ ಕೊಟ್ಟಿದೆ. ಈಗ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ರಘುಮೂರ್ತಿ ಅವರು ರೈತರ ಅಹವಾಲು ಆಲಿಸಿದರು. ಈ ವೇಳೆ ರೈತರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನಂತರ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಮುಖ್ಯ ಇಂಜಿನಿಯರ್ ಗಣೇಶ್, ಅಧೀಕ್ಷಕ ಅಭಿಯಂತರ ರಘುಮೂರ್ತಿ ಸೇರಿದಂತೆ ಅಧಿಕಾರಿಗಳು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಸೆಪ್ಟೆಂಬರ್ 27 ರಿಂದ ಎರಡನೇ ಕಟ್ಟು ನೀರನ್ನು ನಾಲೆಗಳಿಗೆ ಹರಿಸಲಾಗುವುದು ಮತ್ತು ಈಗ ಉಳಿಕೆ ಮಾಡಿರುವ ನೀರನ್ನು ಮೂರನೇ ಕಟ್ಟಿಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.ಆನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಕೆ.ಜಿ. ಗುರುಸ್ವಾಮಿ, ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌರಿಶಂಕರ್, ಸಿದ್ದೇಶ್, ದೇವನೂರು ವಿಜಯೇಂದ್ರ, ಉಡಿಗಾಲ ರೇವಣ್ಣ ಸೇರಿದಂತೆ ಹಲವು ರೈತ ಮುಖಂಡರು,ನೂರಾರು ರೈತರು ಪಾಲ್ಗೊಂಡಿದ್ದರು.
