ಮೈಸೂರು: ನಿಮ್ಮ ಆರೋಗ್ಯ ನಮ್ಮ ಹೊಣೆ ಎಂದು ಪೌರಕಾರ್ಮಿಕರಿಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಸವಿತಾರವರು ಭರವಸೆ ನೀಡಿದರು.
ನಗರದ ಎಂಜಿ ರಸ್ತೆಯಲ್ಲಿರುವ ಜೆಎಸ್ಎಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆ ಆಯೋಜಿಸಲಾಗಿದ್ದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಾಗೆಯೇ ನಿಮ್ಮ ಆರೋಗ್ಯದ ಹೊಣೆ ನಮ್ಮದು ಎಂದು ಆಯುಕ್ತರು ತಿಳಿಸಿದರು.
ಪೌರ ಕಾರ್ಮಿಕರಿಗೆ ಕಿಡ್ನಿ, ಲಿವರ್, ಥೈರಾಯ್ಡ್, ಪರೀಕ್ಷೆ ಒಳಗೊಂಡಂತೆ ಎಕ್ಸರೇ, ರಕ್ತಪರೀಕ್ಷೆ ಹಾಗೂ ಕಣ್ಣಿನ ತಪಾಸಣೆಯನ್ನು ಮಾಡಲಾಗುತ್ತದೆ. ಹಾಗೆಯೇ ಮಹಿಳೆಯರಿಗೆ ಸ್ತ್ರೀರೋಗ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣೆಗಳನ್ನು ಸಹ ನಡೆಸಲಾಗುತ್ತದೆ ಎಂದು ಸವಿತಾ ತಿಳಿಸಿದರು.
ಈ ತಪಾಸಣೆಗಳನ್ನು ಖಾಸಗಿಯಾಗಿ ಮಾಡಿಸಿದ್ದರೆ 5ರಿಂದ 6 ಸಾವಿರ ರೂಗಳಷ್ಟು ಪೌರಕಾರ್ಮಿಕರಿಗೆ ವೆಚ್ಚವಾಗುತ್ತಿತ್ತು. ಈ ಎಲ್ಲಾ ತಪಾಸಣೆಗಳನ್ನು ಜೆಎಸ್ಎಸ್ ಆಸ್ಪತ್ರೆಯವರು ಉಚಿತವಾಗಿ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸುವಾಗ ಎಲ್ಲಾ ಪೌರಕಾರ್ಮಿಕರು ತಪಾಸಣೆಗೆ ಒಳಪಡುತ್ತಿರಲಿಲ್ಲ. ಹಾಗಾಗಿ ಈ ಬಾರಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಳೆದ ಒಂದು ತಿಂಗಳಿಂದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ ಮಾಹಿತಿ ನೀಡಿದರು.
ಪೌರ ಸಿಬ್ಬಂದಿ ಬೆಳಗಿನಿಂದಲೇ ತಮ್ಮ ಕಾರ್ಯವನ್ನು ಆರಂಭಿಸುವುದರಿಂದ ಅವರು ಹೆಚ್ಚಾಗಿ ಆರೋಗ್ಯ ತಪಾಸಣೆಗೆ ಒಳಪಡುತ್ತಿರಲಿಲ್ಲ. ಅವರಲ್ಲಿ ಎಷ್ಟೋ ಮಂದಿಗೆ ಬಿಪಿ, ಶುಗರ್ ಸಮಸ್ಯೆ ಇರುವುದು ಗೊತ್ತೇ ಆಗುತ್ತಿರಲಿಲ್ಲ ಹಾಗಾಗಿ ಈ ಉಚಿತ ಆರೋಗ್ಯ ತಪಾಸಣೆಯಿಂದ ಅವರಲ್ಲಿರುವ ದೈಹಿಕ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗಲಿದೆ ಎಂದು ಆಯುಕ್ತರಾದ ಸವಿತಾ ಅವರು ಹೇಳಿದರು.
ನಂತರ ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಅವರು ಮಾತನಾಡಿ, ನಗರವನ್ನು ಸ್ವಚ್ಛ ಮಾಡುವ ನಿಮ್ಮ ಆರೋಗ್ಯವು ಸಹ ಸ್ವಚ್ಛವಾಗಿರಬೇಕು. ನೀವು ಆರೋಗ್ಯವಾಗಿದ್ದರೆ ಇನ್ನೂ ಉತ್ತಮವಾಗಿ ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕಾಳಜಿ ಹಿನ್ನೆಲೆಯಲ್ಲಿ ಈ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುತ್ತಿದೆ ಎಂದು ಹೇಳಿದರು.
ನಿಮಗಾಗಿ ಜೆಎಸ್ಎಸ್ ಆಸ್ಪತ್ರೆಯಲ್ಲಿ ವಿಶೇಷ ಡೆಸ್ಕ್ ಅನ್ನು ತೆಗೆಯಲಾಗುತ್ತದೆ ನಿಮಗೆ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಬಂದು ಆರೋಗ್ಯ ತಪಾಸಣೆಗೆ ಒಳಗಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಬೆಟ್ಸೂರ್ ಮಠ ಹಾಗೂ ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕರಾದ ಮಧು ಅವರು ಹಾಜರಿದ್ದರು.
