ಮೈಸೂರು: ತಂದೆಯ ಹೆಸರು ಕೆಡಿಸಲು ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ತಂದೆಯನ್ನು ತೇಜೋವಧೆ ಮಾಡಿ ಲೆಗಸಿ ಹಾಳು ಮಾಡಿ ಬ್ಲಾಕ್ ಮೇಲ್ ಮಾಡಲು ಪ್ರಯತ್ನ ನಡೆದಿದೆ ಎಂದು ಸಚಿವ ಡಾ.ಯತೀಂದ್ರ ಹೇಳಿದರು.
ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಯತೀಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಪುತ್ತೂರು ಟಿಕೆಟ್ ಗಾಗಿ ಒಬ್ಬ ಮಹಿಳೆ ಈ ಪ್ರಕರಣದಲ್ಲಿದ್ದಾರೆ. ಆ ಮಹಿಳೆ ನಮ್ಮ ಪಕ್ಷದವರೇನೆ, ಸ್ಟಿಂಗ್ ಮಾಡಿ ಟಿಕೆಟ್ ಗೆ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ. ತಂದೆ ಬೇಜಾರಾಗಿದ್ದಾರೆ. 40 ವರ್ಷ ಕಳಂಕ ಇಲ್ಲದೆ ರಾಜಕಾರಣ ಮಾಡಿದ್ದಾರೆ. ಸತ್ಯ ನಮ್ಮ ಕಡೆ ಇದೆ, ಸತ್ಯ ಹೊರಗೆ ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಟಿಂಗ್ ಪ್ರಕರಣದ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ತಂದೆಗೆ ಮಾಹಿತಿ ಬಂದಿದೆ. ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಯಾರೇ ಇದ್ದರೂ ಅರೆಸ್ಟ್ ಮಾಡಲು ತಂದೆ ಹೇಳಿದ್ದಾರೆ. ನಮ್ಮ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ. ತನಿಖೆ ಸರಿಯಾಗಿ ನಡೆಯುತ್ತಿದೆ. ಅಕಸ್ಮಾತ್ ತನಿಖೆ ಸರಿಯಾಗಿ ನಡೆಯದಿದ್ದರೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಯತೀಂದ್ರ ಹೇಳಿದರು.
ದಸರಾ ಸರ್ಕಾರಿ ಜಾಹೀರಾತಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಫೋಟೋ ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿ ಬಾರಿ ಉಸ್ತುವಾರಿ ಸಚಿವರ ಫೋಟೋ ಹಾಕುವುದಿಲ್ಲ. ನಾನು ಇದನ್ನು ಪರಿಶೀಲನೆ ಮಾಡಿದ್ದೇನೆ. ಆದರೆ ಈ ಬಾರಿ ಮಹಾರಾಜರ ಫೋಟೋ ಹಾಕಿದ್ದಾರೆ. ಮಹಾರಾಜರು ಒಂದು ಪಕ್ಷದಲ್ಲಿದ್ದಾರೆ. ಹೀಗಾಗಿ ಕಾರ್ಯಕರ್ತರು ಉಸ್ತುವಾರಿ ಸಚಿವರ ಫೋಟೋ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.
ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಿಷ್ಟಾಚಾರದಲ್ಲಿ ಸಿಎಂ ಪತ್ನಿ ಹಾಗೂ ಇಬ್ಬರು ಸಿಎಂಗಳ ಹೆಸರು ಇರಲಿಲ್ಲ ಎಂಬುದು ನಿಜ. ಆದರೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿರುವುದು ತಪ್ಪೇನಲ್ಲ. ಅವರು ದೇವಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಅಷ್ಟೇ. ಅವರು ಸರ್ಕಾರದ ಕೆಲಸವನ್ನೇನು ಮಾಡಿಲ್ಲ, ಹಾಗಾಗಿ ಶಿಷ್ಟಾಚಾರ ಉಲ್ಲಂಘನೆಯಾದರೂ ತಪ್ಪೇನಿಲ್ಲ ಎಂದು ಡಾ.ಯತೀಂದ್ರ ಸಮರ್ಥಿಸಿಕೊಂಡರು.
