ನಂಜನಗೂಡು: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ಕು ವಿಧದ ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಂಗಡಣೆಯ ಮಹತ್ವ, ಪರಿಸರ ಸಂರಕ್ಷಣೆಯಲ್ಲಿ ಅದರ ಪಾತ್ರ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಜವಾಬ್ದಾರಿಗಳ ಕುರಿತು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳು ಧನಲಕ್ಷ್ಮಿ ಮತ್ತು ಅವರ ತಂಡ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ತ್ಯಾಜ್ಯವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಗೃಹ ಬಳಕೆಯ ಅಪಾಯಕಾರಿ ತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ವಿಲೇವಾರಿ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ತಗ್ಗಿಸಬಹುದು ಎಂದು ಹೇಳಿದರು.
ಹಸಿ ತ್ಯಾಜ್ಯ ವಿಭಾಗದಲ್ಲಿ ಆಹಾರದ ಅವಶೇಷಗಳು, ಹಣ್ಣು-ತರಕಾರಿ ಸಿಪ್ಪೆಗಳು, ಎಲೆಗಳು ಹಾಗೂ ಜೈವಿಕ ವಸ್ತುಗಳು ಸೇರಿದ್ದು, ಇವುಗಳಿಂದ ಗೊಬ್ಬರ ತಯಾರಿಸಬಹುದು ಎಂದು ತಿಳಿಸಿದರು.
ಒಣ ತ್ಯಾಜ್ಯ ವಿಭಾಗದಲ್ಲಿ ಕಾಗದ, ಪ್ಲಾಸ್ಟಿಕ್, ಗಾಜು, ಲೋಹ ಹಾಗೂ ಮರುಬಳಕೆ ಸಾಧ್ಯವಾಗುವ ವಸ್ತುಗಳು ಸೇರಿದ್ದು, ಇವುಗಳನ್ನು ಮರುಬಳಕೆ ಘಟಕಗಳಿಗೆ ಕಳುಹಿಸುವ ಮೂಲಕ ಸಂಪನ್ಮೂಲಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಗೃಹಬಳಕೆಯ ಅಪಾಯಕಾರಿ ತ್ಯಾಜ್ಯ ವಿಭಾಗದಲ್ಲಿ ಬ್ಯಾಟರಿಗಳು, ವಿದ್ಯುತ್ ಬಲ್ಬ್ಗಳು, ಔಷಧಿಗಳ ಅವಶೇಷಗಳು, ಬಣ್ಣದ ಡಬ್ಬಿಗಳು ಹಾಗೂ ರಾಸಾಯನಿಕ ವಸ್ತುಗಳು ಸೇರಿದ್ದು, ಇವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂದು ಸಲಹೆ ನೀಡಿದರು.
ಸ್ಯಾನಿಟರಿ ತ್ಯಾಜ್ಯ ವಿಭಾಗದಲ್ಲಿ ಬಳಸಿದ ಸ್ಯಾನಿಟರಿ ಪ್ಯಾಡ್ಗಳು, ಡೈಪರ್ಗಳು ಹಾಗೂ ಇತರೆ ವೈಯಕ್ತಿಕ ಸ್ವಚ್ಛತಾ ವಸ್ತುಗಳು ಸೇರಿದ್ದು, ಇವುಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ವಿಲೇವಾರಿ ಮಾಡಬೇಕೆಂದು ತಿಳಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಮನೆ, ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು
ಸ್ವಚ್ಛ ಭಾರತ್ ಅಭಿಯಾನ ಆಪ್ ಮೂಲಕ ಎಲ್ಲ ನಾಗರಿಕರು ಈ ಆಪ್ ಬಳಸಿಕೊಂಡು ನಾಗರಿಕ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ದಿನೇಶ್, ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಎಚ್ ಕೆ ಪ್ರಕಾಶ್,ಡಾ. ಮಾಲತಿ ಮತ್ತಿತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
