(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಆರ್ ನಂಜುಂಡಯ್ಯ ಅವರು ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.
ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳ ಮುಂಜಾಗ್ರತಾ ಪರಿಶೀಲನೆ ನಡೆಸಿ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.
2026-27ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾದ ಹಿನ್ನೆಲೆಯಲ್ಲಿ ಜಿಲ್ಲಾ ಹಂತದ ಅಧಿಕಾರಿಗಳೊಡನೆ ಪಟ್ಟಣದ ಸರ್ಕಾರಿ ಆದರ್ಶ ಶಾಲೆ, ಸರ್ಕಾರಿ ಎ ಸ್ವಿ ಕೆ ಬಾಲಕಿಯರ ಪ್ರೌಢಶಾಲೆ, ಎಂ ಸಿ ಕೆ ಸಿ ಖಾಸಗಿ ಅನುದಾನಿತ ಪ್ರೌಢ ಶಾಲೆ, ಆರ್ ಸಿ ಎಂ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆ, ಹಾಗೂ ತಾಲ್ಲೂಕಿನ ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದುವನಹಳ್ಳಿಯ ಆರುವನಪುರ ಸರ್ಕಾರಿ ಪ್ರಾಥಮಿಕ ಶಾಲೆ ಗಳಿಗೆ ಭೇಟಿ ನೀಡಿ ಮಕ್ಕಳ ಮಧ್ಯಾಹ್ನದ ಬಿಸಿಯೂಟ, ಕ್ಷೀರ ಭಾಗ್ಯ, ಮೊಟ್ಟೆ ಬಾಳೆಹಣ್ಣು ವಿತರಣೆ, ಆಹಾರ ಧಾನ್ಯಗಳ ಸಂರಕ್ಷಣೆ, ಅಡುಗೆಗೆ ಅಗತ್ಯವಿರುವ ಅನಿಲ ಲಭ್ಯತೆ, ಸಿಬ್ಬಂದಿಗಳ ಕಾರ್ಯ ವೈಖರಿ, ಮಕ್ಕಳ ಯೋಗ ಕ್ಷೇಮ ಸೇರಿದಂತೆ ಇನ್ನಿತರ ಅಗತ್ಯತೆ ಬಗ್ಗೆ ಪರಿಶೀಲನೆ ನಡೆಸಿದರು.
ಬೇಟಿ ವೇಳೆ ಹಾಜರಿದ್ದ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ತಮ್ಮ ತಮ್ಮ ಶಾಲೆ ಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪೂರ್ವ ಸಿದ್ಧತೆ ಕೈಗೊಂಡಿರುವ ಬಗ್ಗೆ ಅಕ್ಷರ ದಾಸೋಹದ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿದರು.
ಮಾಹಿತಿ ಪಡೆದ ಬಳಿಕ ಅಧಿಕಾರಿಗಳು ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಅಡಿಗೆ ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡಿ ಯೋಜನೆಯನ್ನು ಪರಿಣಾಮಕಾರಿ ಯಾಗಿ ಅನುಷ್ಠಾನ ಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿ ರೇವಣ್ಣ ಹಾಗೂ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಂದೀಶ ಹಾಜರಿದ್ದರು.
