ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರುಗೆ ಭಾರೀ ಮುಖಭಂಗವಾಗಿದೆ.
ಅವರು 4ನೇ ಬಾರಿಗೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ವಿಶ್ವಾಸದಲ್ಲಿದ್ದರು.ಆದರೆ ವಿಧಿಯಾಟ ಬೇರೆಯೇ ಇತ್ತು.ಹಾಗಾಗಿ ಅವರು ಸೋತು ಹೋಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಲಗ್ಗೆ ಇಟ್ಟು ಬೀಗಿದರೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಮುಖಭಂಗವಾಗಿದೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಬಿಜೆಪಿ ಬಹುಮತ ಮುನ್ನಡೆ ಸಾಧಿಸಿತ್ತು. ಆದರೂ ಮಮತಾ ಬ್ಯಾನರ್ಜಿ ಸೂರ್ಯಾಸ್ತವಾಗುವಷ್ಟರಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಡಿಯೋ ಮೂಲಕ ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿದ್ದರು.
ಸಂಜೆ ಟಿಎಂಸಿ ಭಾರೀ ಸೋಲನ್ನು ಅನುಭವಿಸುತ್ತಿದ್ದಂತೆ ಬಿಜೆಪಿ ನಮ್ಮ ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಆರೋಪ ಮಾಡಿದ್ದರು.
ಈಗ ತಮ್ಮ ತವರು ಕ್ಷೇತ್ರ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಹೀನಾಯವಾಗಿ ಸೋಲನುಭವಿಸಿದ್ದಾರೆ.
ಅವರು 20ನೇ ಸುತ್ತಿನ ಎಣಿಕೆಯ ನಂತರ 73,463 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ 58,349 ಮತಗಳನ್ನು ಪಡೆದರು. ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಅವರನ್ನು 15,114 ಮತಗಳಿಂದ ಸೋಲಿಸಿದ್ದಾರೆ.
ಮಮತಾ ಬ್ಯಾನರ್ಜಿಯವರ ರಾಜಕೀಯ ಭದ್ರಕೋಟೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಈ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ.
ಕಳೆದ ಚುನಾವಣೆಯಲ್ಲೂ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರು ಆದರೆ, ಆ ಚುನಾವಣೆಯಲ್ಲಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದರು. ಈ ಬಾರಿ ಭವಾನಿಪುರ ಕ್ಷೇತ್ರದಲ್ಲೇ ಸೋತಿದ್ದಾರೆ.
ಏಳನೇ ಸುತ್ತಿನ ಅಂತ್ಯದ ವೇಳೆಗೆ ಮಮತಾ ಬ್ಯಾನರ್ಜಿ 17,000ಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಹೊಂದಿದ್ದರು. ಆದರೆ ನಂತರದ ಸುತ್ತುಗಳಲ್ಲಿ ಅಂತರ ಕಡಿಮೆಯಾಗುತ್ತಾ ಹೋಯಿತು.
