ಕೊಡಗು: ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ಕೊಡಗು ಜಿಲ್ಲೆಯ ವೀರಜಪೇಟೆ ತಾಲೂಕಿನ ಬರ್ಪುಹೊಳೆ ಪ್ರದೇಶದಲ್ಲಿ ಆಯೋಜಿಸಲಾದ ವೈಟ್ ವಾಟರ್ ರಾಫ್ಟಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಸ ಶಿಕ್ಷಣವು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿದೆ, ಯುವಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಾಹಸ ಕ್ರೀಡೆಗಳು ದೇಹದ ಆರೋಗ್ಯ ಮಾತ್ರವಲ್ಲದೆ ಮನಸ್ಸಿನ ಸ್ಥೈರ್ಯವನ್ನೂ ಹೆಚ್ಚಿಸುತ್ತವೆ ಎಂದು ಡಾ.ಬಾಲಾಜಿ ತಿಳಿಸಿದರು.
ಸರ್ಕಾರವು ಸಾಹಸ ಕ್ರೀಡೆಗಳಿಗೆ ಇನ್ನೂ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಯುವಜನರನ್ನು ಈ ಕ್ಷೇತ್ರದತ್ತ ಆಕರ್ಷಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕಯಾಕಿಂಗ್ ಕ್ರೀಡಾಪಟುಗಳಾದ ಕುಮಾರಿ ಐಶ್ವರ್ಯ ಮತ್ತು ಕುಮಾರಿ ಧನಲಕ್ಷ್ಮಿ ಅವರ ಸಾಧನೆಯನ್ನು ಡಾ. ಬಾಲಾಜಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಾಹಸ ತರಬೇತುದಾರರಾದ ಶಬೀರ್ ಮತ್ತು ರಾಜ್ ಬಶೀರ್ ಶಿಬಿರವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಶಿಬಿರದಲ್ಲಿ ರಾಜ್ ಪಾಳ್ಯದಾರ್, ವಿದ್ಯಾ, ಅಶೋಕ್ ನಾಯಕ್, ಕನ್ನಡಿಗ ಕಿರಣ್, ಸುಜಯ್ ನಾಯ್ಡು, ದೀಪಕ್ ತಿಗಳ ಸೇರಿದಂತೆ ಅನೇಕ ಸಾಹಸಾಸಕ್ತರು ಭಾಗವಹಿಸಿದ್ದರು.
