ಮೈಸೂರು, ಜೂನ್. 1: ಬೇಸಿಗೆ ರಜೆ ಮುಗಿಸಿ ಇಂದಿನಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷ ಅಧಿಕೃತವಾಗಿ ಆರಂಭವಾಗಿದ್ದು, ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಕಲರವ ಮತ್ತೆ ಪ್ರಾರಂಭವಾಗಿದೆ.
ಕಳೆದ ಎರಡು ತಿಂಗಳ ರಜೆಯ ನಂತರ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಗುಲಾಬಿ ಹೂ, ಸಿಹಿ ಹಂಚಿ ಆತ್ಮೀಯವಾಗಿ ಬರಮಾಡಿಕೊಂಡರು.
ಮೈಸೂರಿನ ಕುವೆಂಪು ನಗರ, ಸರಸ್ವತಿಪುರಂ, ವಿಜಯನಗರ ಇಟ್ಟಿಗೆಗೂಡು ಸೇರಿದಂತೆ ಹಲವೆಡೆ ಶಾಲೆಗಳ ಮುಂದೆ ಪೋಷಕರು ಮಕ್ಕಳನ್ನು ಬಿಡಲು ಬೆಳಗ್ಗೆಯಿಂದಲೇ ಕಿಕ್ಕಿರಿದು ಸೇರಿದ್ದರು.
ಹಲವು ಶಾಲೆಗಳಲ್ಲಿ ಮೊದಲ ದಿನದಂದೇ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಗಳನ್ನು ತಳಿರು-ತೋರಣ, ಬಲೂನ್ಗಳಿಂದ ಸಿಂಗರಿಸಲಾಗಿತ್ತು. 1ನೇ ತರಗತಿಗೆ ಹೊಸದಾಗಿ ದಾಖಲಾದ ಪುಟಾಣಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ ಸ್ವಾಗತ ಕೋರಲಾಯಿತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು, ಬಿಸಿಯೂಟ ನೀಡಲಾಯಿತು.
ಎರಡು ತಿಂಗಳು ಮಕ್ಕಳಿಲ್ಲದೆ ಶಾಲೆ ಬಣಗುಡುತ್ತಿತ್ತು. ಇವತ್ತು ಮತ್ತೆ ಶಾಲೆ ಜೀವಂತವಾಗಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶಾರದಮ್ಮ ಸಂತಸ ವ್ಯಕ್ತಪಡಿಸಿದರು.
ಮಕ್ಕಳು ಶಾಲೆಗೆ ಹೋಗುತ್ತಿರುವುದಕ್ಕೆ ಬಹುತೇಕ ಪೋಷಕರು ಸಂತಸ ವ್ಯಕ್ತಪಡಿಸಿದರೆ, ಕೆಲವರು ಸಂಚಾರ ದಟ್ಟಣೆ, ಪುಸ್ತಕ-ಸಮವಸ್ತ್ರದ ಬೆಲೆ ಏರಿಕೆ ಬಗ್ಗೆ ಬೇಸರ ಪಟ್ಟರು.
ಆಟೋ, ವ್ಯಾನ್ ಚಾರ್ಜ್ ಈ ವರ್ಷ ಜಾಸ್ತಿ ಆಗಿದೆ. ಆದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದರು ಕುವೆಂಪು ನಗರದ ಪೋಷಕ ರಮೇಶ್.
ಶಿಕ್ಷಣ ಇಲಾಖೆ ಈಗಾಗಲೇ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ತಲುಪಿಸಿದೆ. ಶಾಲೆ ಆರಂಭದ ಮೊದಲ ವಾರ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ನಡೆಸಲು ಸೂಚನೆ ನೀಡಲಾಗಿದೆ. ಮಕ್ಕಳ ಹಾಜರಾತಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಲು ಬಿಇಒ,ಡಿಡಿಪಿಐ ಮಟ್ಟದ ಅಧಿಕಾರಿಗಳು ಈಗಿನಿಂದಲೇ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.
ಜಿಲ್ಲಾಧಿಕಾರಿಗಳು ಈಗಾಗಲೇ ಎಲ್ಲಾ ಶಾಲಾ ವಾಹನಗಳ ಫಿಟ್ನೆಸ್, ಚಾಲಕರ ದಾಖಲೆ ಪರಿಶೀಲನೆಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಜೂನ್ 1ರಿಂದ ನವೆಂಬರ್ 10ರ ವರೆಗೆ ಮೊದಲ ಅವಧಿ.
ಅಕ್ಟೋಬರ್ 15 ರಿಂದ 28 ರ ವರೆಗೆ ದಸರಾ ರಜೆ.
ಶಾಲಾ ಸಮಯ: ಬೆಳಗ್ಗೆ 9.30 ರಿಂದ ಸಂಜೆ 4.30 ರ ವರೆಗೆ ಇರಲಿದೆ.
