ಮೈಸೂರು: ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಹಳೆ ಸಂತೆಪೇಟೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ದಿನಪತ್ರಿಕೆಗಳನ್ನು ಉಚಿತವಾಗಿ ವಿತರಿಸಿ ಪತ್ರಿಕಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮೂಡ ಅಧ್ಯಕ್ಷರಾದ ಎಚ್ ವಿ ರಾಜೀವ್ ಅವರು,ಪ್ರತಿಯೊಬ್ಬರೂ
ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿದಿನ ಪೈಪೋಟಿ ಹೆಚ್ಚುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ,ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆಯನ್ನು ಓದುವ ದಿನಚರಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಮಾತನಾಡಿ,
ಪತ್ರಕರ್ತರಿಗೆ ಬಿಡುವು ಎಂಬುದಿಲ್ಲ, ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ, ಕುಟುಂಬದ ಸದಸ್ಯರೊಂದಿಗೆ ಇರಲು ಸಹ ಅವರಲ್ಲಿ ಸಮಯ ಇರುವುದಿಲ್ಲ, ಒತ್ತಡದ ನಡುವೆಯೇ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರುವಂತಹ ಕಾರ್ಯಕ್ರಮ ಏರ್ಪಡಿಸಲು ಪತ್ರಜರ್ತರ ಸಂಘ ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಅವರು ಮಾತನಾಡಿ,
ಮೈಸೂರು ನಿಜವಾದ ಅರ್ಥದಲ್ಲಿ ಪತ್ರಿಕೆಗಳ ತವರೂರು, ಮಂಗಳೂರು ಸಮಾಚಾರ ಎಂಬುದು ಕ್ರಿಶ್ಚಿಯನ್ ಮಿಶಿನರಿಗಳ ಮಾಸಿಕ ಸಂಚಿಕೆ ಮೊದಲಿಗೆ ಹೊರಹೊಮ್ಮಿದ್ದರೂ ಕೂಡ ಸಾರ್ವಜನಿಕವಾಗಿ ಪತ್ರಿಕಾ ಮಾಧ್ಯಮ ಮುದ್ರಣ ಹೊರಹೊಮ್ಮಿದ್ದು ಮೈಸೂರಿನಲ್ಲಿಯೇ ಪ್ರಪಥಮ, ಹಾಗಾಗಿ ಪತ್ರಿಕಾ ಮಾಧ್ಯಮಕ್ಕೆ ಮೈಸೂರಿನಲ್ಲಿ ವಿಶಿಷ್ಟ ಸ್ಥಾನವಿದೆ, ಅದರಲ್ಲೂ ತಾತಯ್ಯನವರನ್ನು ಮಹಾತ್ಮ ಗಾಂಧಿಯವರು ಪತ್ರಿಕಾರಂಗದ ಭೀಷ್ಮ ಎಂದು ಕರೆದಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ, ಕೆ ಎಮ್ ಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್ ಎನ್ ರಾಜೇಶ್, ಹಿರಿಯ ಪತ್ರಿಕಾ ವಿತರಕರಾದ ರಮಾಬಾಯಿ,
ರಾಕೇಶ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.
