ನಂಜನಗೂಡು: ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಸಂಶೋಧನೆ, ಹೊಸ ಆವಿಷ್ಕಾರಗಳತ್ತ ಗಮನ ಹರಿಸಬೇಕೆಂದು ತಾಂಡವಪುರದ ಎಂಐಟಿ ಇಂಜಿನಿಯರಿಂಗ್ ಕಾಲೇಜಿನ ಎಂ ಸಿ ಎ ವಿಭಾಗದ ಮುಖ್ಯಸ್ಥರಾದ ಶಿವು ಮಂಜೇಶ್ ಸಲಹೆ ನೀಡಿದರು.
ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಅಂಗವಾಗಿ ನಂಜನಗೂಡು ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ತಂತ್ರಜ್ಞಾನದ ಬೆಳವಣಿಗೆಯ ಇತಿಹಾಸ, ಅದರ ಪ್ರಸ್ತುತ ಅಗತ್ಯತೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ವಿವರಿಸಿದರು.
ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಡಿಜಿಟಲ್ ತಂತ್ರಜ್ಞಾನ, ರೋಬೋಟಿಕ್ಸ್, ಬಾಹ್ಯಾಕಾಶ ಸಂಶೋಧನೆ ಮತ್ತು ಹಸಿರು ತಂತ್ರಜ್ಞಾನಗಳು ಇಂದಿನ ಜಗತ್ತಿನ ಅಭಿವೃದ್ಧಿಯ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಜೊತೆಗೆ, ಯುವಜನರಲ್ಲಿ ನವೋದ್ಯಮ ಮತ್ತು ಸಂಶೋಧನಾ ಮನೋಭಾವವನ್ನು ಬೆಳೆಸುವ ಮಹತ್ವದ ಸಂದೇಶವನ್ನು ನೀಡಿದರು.
ಪ್ರತಿಯೊಬ್ಬರು ಡಿಜಿಟಲ್ ಲಾಕ್ ಮೂಲಕ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು. ನಾನು ಈ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು ಈ ಮಟ್ಟಕ್ಕೆ ಬರಲು ಇದೇ ಕಾಲೇಜು ಕಾರಣ ಎಂದು ಶಿವುಮಂಜೇಶ್ ಹೇಳಿದರು.
ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎಂ.ಎಸ್. ರಾಮಪ್ರಸಾದ್ ಅವರು ಉದ್ಘಾಟಿಸಿದರು.
ತಂತ್ರಜ್ಞಾನವು ಇಂದು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಹಾಗೂ ಸಂವಹನ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ ಎಂದು ಹೇಳಿದರು.
ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಯುವಜನತೆ ತಮ್ಮ ಪ್ರತಿಭೆ ಮತ್ತು ಜ್ಞಾನವನ್ನು ದೇಶದ ಅಭಿವೃದ್ಧಿಗೆ ಸಮರ್ಪಿಸಬೇಕು ಎಂದು ಕರೆ ನೀಡಿದರು.
ಮೈ ಭಾರತ ಕೇಂದ್ರ,ಮೈಸೂರು ಯುವ ಅಧಿಕಾರಿ ಬಿ. ಅಖಿಲ್ ಅವರು ರಾಷ್ಟ್ರೀಯ ತಂತ್ರಜ್ಞಾನ ದಿನದ ಆಚರಣೆಯ ಹಿನ್ನೆಲೆ, ಅದರ ಮಹತ್ವ ಹಾಗೂ ದೇಶದ ವೈಜ್ಞಾನಿಕ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನವು ರಾಷ್ಟ್ರದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಪ್ರಮುಖ ಶಕ್ತಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಮಾತನಾಡಿ, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವನ್ನು ಒತ್ತಿಹೇಳಿದರು.
ಇಂದಿನ ವಿದ್ಯಾರ್ಥಿಗಳು ಡಿಜಿಟಲ್ ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ತಂತ್ರಜ್ಞಾನವು ಮಾನವ ಕಲ್ಯಾಣಕ್ಕಾಗಿ ಬಳಸಲ್ಪಟ್ಟಾಗ ಮಾತ್ರ ಅದರ ನಿಜವಾದ ಮೌಲ್ಯ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪ್ರಾರ್ಥನೆ ಕುಮಾರಿ ರಶ್ಮಿ, ಸ್ವಾಗತ ಹೆಚ್ ಕೆ.ಪ್ರಕಾಶ್ , ವಂದನಾರ್ಪಣೆ ಎಸ್ ಲಿಂಗಣ್ಣ ಸ್ವಾಮಿ, ನಿರೂಪಣೆ ಡಾ.ಕೆ.ಮಾಲತಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ವಿಶೇಷ ಉಪನ್ಯಾಸದಿಂದ ಪ್ರೇರಣೆ ಪಡೆದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವ್ಯಕ್ತಪಡಿಸಿದರು.
