ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕು ಪಂಚಾಯಿತಿಯಲ್ಲಿ ನರೇಗಾ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಪಾಲ ಕೃಷ್ಣ ಹಾಗೂ ತಾಲ್ಲೂಕಿನ ಪಾಳ್ಯ ಗ್ರಾ.ಪಂ ಕಾರ್ಯದರ್ಶಿ ಸಿದ್ದಯ್ಯ ಅವರು ವಯೋನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಈ ಇಬ್ಬರು ನಿವೃತ್ತರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ನಿವೃತ್ತಿ ಹೊಂದಿದವರಿಗೆ ಸನ್ಮಾನಿಸಿ ಮಾತನಾಡಿದ ಕುಮಾರ ಅವರು ನಾನು ಸರ್ಕಾರಿ ನೌಕರಿಗೆ ಸೇರಿ 23 ವರ್ಷವಾಗಿದೆ. ಆಗ ನಿರುದ್ಯೋಗ ಸಮಸ್ಯೆ ಸಾಕಷ್ಟಿತ್ತು. ನಮ್ಮೊಡನೆ ನೌಕರಿಗೆ ಸೇರಿದ ಗೋಪಾಲಕೃಷ್ಣ ಅವರು ಹನೂರು ಹಾಗೂ ಕೊಳ್ಳೇಗಾಲ ತಾಲೂಕುಗಳಲ್ಲೂ ಕೆಲಸ ಮಾಡಿದ್ದಾರೆ. ಪಂಚಾಯತಿಗಳಲ್ಲಿ ಸಾಕಷ್ಟು ಒತ್ತಡವಿರುತ್ತದೆ. ಅದರಲ್ಲೂ ಒಂದೇ ತಾಲ್ಲೂಕಿನಲ್ಲಿ ಜನರ ಜೊತೆ ಸುಧೀರ್ಘ ಅವಧಿಯಲ್ಲಿ ಕೆಲಸ ಮಾಡುವುದೆಂದರೆ ಸಾಹಸದ ಕೆಲಸ ಎಂದು ಹೇಳಿದರು.
ನೀವು ಇನ್ನು ಮುಂದೆ ಯಾರ ಒತ್ತಡಕ್ಕೂ ಒಳಗಾಗದೆ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ಹಾಗೆಯೇ ನಿಮ್ಮ ತಂದೆ ನಿಮಗಾಗಿ ದುಡಿದಿದ್ದಾರೆ ಇನ್ನು ಮುಂದೆ ನಿಮ್ಮ ತಂದೆಗಾಗಿ ನೀವು ದುಡಿಯಿರಿ, ಚೆನ್ನಾಗಿ ನೋಡಿಕೊಳ್ಳಿ ಮಕ್ಕಳಿಗೂ ತಿಳಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಪಾಲಕೃಷ್ಣ ಅವರು ಬಹಳ ಸಂತೋಷದಿಂದ ನಿವೃತ್ತಿ ಹೊಂದುತ್ತಿದ್ದೇನೆ. ಓದುವಾಗ ನನಗೆ ಕಷ್ಟವಾಗಲಿಲ್ಲ ಆದರೆ ಉದ್ಯೋಗ ಹುಡುಕುವಾಗ ಸಾಕಷ್ಟು ಯೋಜನಾ ಕಾರ್ಯಕ್ರಮ ಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಯೋಜನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ 2003 ರಲ್ಲಿ ಬ್ಲಾಕ್ ಹುದ್ದೆ ನೇಮಕಾತಿ ಮಾಡಿದಾಗ ಚಾಮರಾಜನಗರ ಜಿಲ್ಲೆಗೆ ಆಯ್ಕೆಯಾದೆ. ಈ ವೇಳೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು ಈ ವೇಳೆ ಶಾಗ್ಯ, ಮಧುವನಹಳ್ಳಿ, ತೆಳ್ಳನೂರು, ಕುಂತೂರು, ತಿಮ್ಮರಾಜಿಪುರ, ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಗಳಲ್ಲಿ, ಸುಧೀರ್ಘವಾಗಿ 23 ವರ್ಷ ಕರ್ತವ್ಯ ನಿರ್ವಹಿಸಿದ್ದೇನೆ ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಒಂದು ವರ್ಷ ಕೆಲಸ ಮಾಡಿದ್ದೇನೆ. ಆದರೆ ತೆಳ್ಳನೂರು ಗ್ರಾಮ ಪಂಚಾಯಿತಿ ಒಂದರಲ್ಲೆ 13 ವರ್ಷ ಕೆಲಸ ಮಾಡಿದ್ದೇನೆ ಎಂದು ತಮ್ಮ ವೃತ್ತಿ ಜೀವನ ಮೆಲಕು ಹಾಕಿದರು.
ನಂತರ 2020 ರಲ್ಲಿ ನರೇಗಾ ಸಹಾಯಕ ನಿರ್ದೇಶಕರಾಗಿದ್ದ ಲಿಂಗರಾಜು ಅವರ ನಿವೃತ್ತಿ ನಂತರ ತೆರವಾದ ಸ್ಥಾನಕ್ಕೆ ಯಾರು ಭಾರದ ಕಾರಣ ಪ್ರಭಾರಿಯಾಗಿ ನನ್ನನ್ನು ನೇಮಕ ಮಾಡಲಾಯಿತು ಅಲ್ಲಿಂದ ಇಲ್ಲಿಯವರೆಗೆ ಸುಮಾರು ಆರು ವರ್ಷಗಳ ಕಾಲ ನರೇಗಾ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿ ಅದೇ ಹುದ್ದೆಯಲ್ಲಿ ಇಂದು ನಿವೃತ್ತಿ ಹೊಂದಿದ್ದೇನೆ ಎಂದು ತಿಳಿಸಿದರು.
ಪಿಡಿಒ ನಂತರ ನಮಗೆ ಪದೋನ್ನತಿ ಸಿಗಲಿಲ್ಲ, ನಂತರ ಸರ್ಕಾರ ನೇರ ನೇಮಕಾತಿಯ ಮೂಲಕ ಪಿಡಿಒ ಗಳನ್ನು ಆಯ್ಕೆಮಾಡಿ ಕೊಂಡಿತು. ಆದ್ದರಿಂದ ನಮಗೆ ಅವಕಾಶ ಸಿಗಲಿಲ್ಲ ಆದರೆ 23 ವರ್ಷ ಗ್ರಾಮೀಣಾಭಿವೃದ್ಧಿ ಇಲಾಖೆ ನನಗೆ ಅನ್ನ ನೀಡಿದೆ. ಇಲಾಖೆಗೆ ನಾನು ಋಣಿಯಾಗಿದ್ದೇನೆ. 24 ವರ್ಷ 11 ತಿಂಗಳು ಸೇವೆ ಮಾಡಿದ ತೃಪ್ತಿ ನನಗಿದೆ ಸರ್ಕಾರಿ ಅನುದಾನವನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಬಹಳ ಸಂತೋಷದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಲೆಕ್ಕಾಧಿಕಾರಿ ರಾಜಣ್ಣ, ನೂತನ ಸಹಾಯಕ ನಿರ್ದೇಶಕ ಸಂದೇಶ್, ಕಚೇರಿ ವ್ಯವಸ್ಥಾಪಕ ಮೈಕಲ್ ರಾಜ್ ಹಾಗೂ ವಿವಿಧ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿ ಹಾಜರಿದ್ದರು.
