ಮೈಸೂರು: ಮೈಸೂರಿನ ಶ್ರವಣ ದೋಷವುಳ್ಳ ಮಕ್ಕಳು ಕೆಎಸ್ಟಿಡಿಸಿ ಅಂಬಾರಿ ಡಬಲ್ ಡೆಕ್ಕರ್ ಬಸ್ನಲ್ಲಿ ನಗರ ಪ್ರದಕ್ಷಿಣೆ ಮಾಡಿ ಖುಷಿ ಪಟ್ಟರು.
ಕಾಂಗ್ರೆಸ್ ಮುಖಂಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಅಂಗವಾಗಿ ಎಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಶ್ರೀರಾಂಪುರ 2ನೇ ಹಂತದ ಮರ್ಸಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯ 150 ವಿದ್ಯಾರ್ಥಿಗಳಿಗೆ ಈ ಅಬಕಾಶ ಕಲ್ಪಿಸಲಾಗಿತ್ತು.
ರಾಮಸ್ವಾಮಿ ವೃತ್ತದ ಬಳಿ ಬಸ್ ಹತ್ತಿದ ಮಕ್ಕಳು ಸಂಸ್ಕೃತ ಪಾಠಶಾಲೆ, ಮೈಸೂರು ಅರಮನೆ, ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಸರ್ಕಾರಿ ಆಯುರ್ವೇದ ಕಾಲೇಜು, ಹಳೇ ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಭವನ, ಪ್ರಾಚ್ಯವಸ್ತು ಸಂಶೋಧನಾಲಯ ಸೇರಿದಂತೆ ಹಲವು ಪಾರಂಪರಿಕ ತಾಣಗಳನ್ನು ವೀಕ್ಷಿಸಿದರು. ಶಾಲೆಯ ಶಿಕ್ಷಕರು ಸಂಜ್ಞಾ ಭಾಷೆಯಲ್ಲಿ ಕಟ್ಟಡಗಳ ಐತಿಹಾಸಿಕ ಹಿನ್ನೆಲೆ ವಿವರಿಸಿದರು.
ಅಂಬಾರಿ ಬಸ್ಗೆ ರಾಮಸ್ವಾಮಿ ವೃತ್ತದಲ್ಲಿ ಎಚ್.ವಿ. ರಾಜೀವ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದ ಮೈಸೂರಿಗೆ ವ್ಯಾಸಂಗಕ್ಕೆ ಬರುವ ಮಕ್ಕಳು ವರ್ಷಗಟ್ಟಲೆ ಇಲ್ಲೇ ಇರುತ್ತಾರೆ. ಅವರಿಗೆ ಮೈಸೂರಿನ ಇತಿಹಾಸ ಪರಿಚಯಿಸುವ ಉದ್ದೇಶದಿಂದ ಈ ನಗರ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ. ಅಂಬಾರಿ ಬಸ್ನಲ್ಲಿ ಸುತ್ತಾಡಿ ಮಕ್ಕಳು ಖುಷಿಪಟ್ಟಿದ್ದು, ಅವರ ಮುಖದಲ್ಲಿ ಮಂದಹಾಸ ನೋಡಿ ತೃಪ್ತಿಯಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಅಶೋಕ್, ಹುಡ್ಕೋ ಕುಮಾರ್ ಮತ್ತಿತರರು ಹಾಜರಿದ್ದರು.
