ಮೈಸೂರು: ಅಹಿಂದ ಸಮುದಾಯ ಅಭಿವೃದ್ಧಿ ಆಗಬೇಕಾದರೆ, ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಬಾರದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಜನನಾಯಕರಾಗಿದ್ದಾರೆ, ಅಹಿಂದ ವರ್ಗದ ನಾಯಕರಾಗಿದ್ದಾರೆ. ಅವರನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವ ದೊಡ್ಡ ಸಂಖ್ಯೆಯ ಮತದಾರರಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದಲ್ಲಿ ಸಿದ್ದರಾಮಯ್ಯ ಅವರಿಗೆ ಅಪಾರ ಜನಬೆಂಬಲ ಇದೆ. ಶೇ.40 ರಿಂದ 50 ರಷ್ಟು ಪ್ರಮಾಣದ ಮತವನ್ನ ಕಾಂಗ್ರೆಸ್ಗೆ ವೈಯಕ್ತಿಕ ನೆಲೆಯಲ್ಲಿ ಸೆಳೆಯುವ ಸಾಮರ್ಥ್ಯವನ್ನು ಸಿದ್ದರಾಮಯ್ಯ ಅವರೊಬ್ಬರೇ ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ಮಂಜು ತಿಳಿಸಿದ್ದಾರೆ.
ಹೀಗಾಗಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಗಳಿಗೂ ಸಿದ್ದರಾಮಯ್ಯ ಅವರ ನಾಯಕತ್ವ ಅತ್ಯಗತ್ಯವಾಗಿದೆ. ಅನೇಕ ಕ್ಷೇತ್ರಗಳಲ್ಲಿ ನಿರ್ಣಾಯಕ ಮತಗಳನ್ನು ಸೆಳೆಯಲು ಅವರು ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಕಾಂಗ್ರೆಸ್ ಪಾಲಿಗೆ ಅನಿವಾರ್ಯ. ಹಾಗಾಗಿ ಅವರು ಚುನಾವಣಾ ರಾಜಕಾರಣದಿಂದ ದೂರವಾದರೆ ಅದು ತಕ್ಕ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯನ್ನು ಉಂಟು ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಗಟ್ಟಿಯಾಗಿರಬೇಕು ಎಂದರೆ ಸಿದ್ದರಾಮಯ್ಯ ಅವರು ಬೇಕೇಬೇಕು. ಸಿದ್ದರಾಮಯ್ಯ ಇಲ್ಲದಿದ್ದರೆ ಪಕ್ಷಕ್ಕೆ ಕಷ್ಟ ಆಗುತ್ತದೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರೆ, ಅಹಿಂದ ಸಮುದಾಯ ಅನಾಥವಾಗುತ್ತದೆ. ವಿಧಾನಸೌಧದ ಹೊರಗಿದ್ದು, ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಹಿಂದುಳಿದವರು, ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕಾದರೆ ದಲಿತರು, ಅಲ್ಪಸಂಖ್ಯಾತರಿಗೂ ಸರ್ಕಾರಿ ಸವಲತ್ತುಗಳು ಸಮರ್ಪಕವಾಗಿ ಸಿಗಬೇಕಾದರೆ, ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಇರಬೇಕು. ಅದಕ್ಕಾಗಿ ಅವರು ಸದಾ ಸಕ್ರಿಯ ರಾಜಕಾರಣದಲ್ಲಿ ಇರಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ರಾಜಕೀಯದಿಂದ ಅವರು ಹಿಂದೆ ಸರಿದರೆ, ಕೇಂದ್ರದಲ್ಲಿ ಅವರಿಗೆ ಉತ್ತಮ ಸ್ಥಾನ ಮಾನ ಸಿಗಬಹುದು. ಮುಂದೆ ರಾಜ್ಯಸಭೆ ಸ್ಥಾನ ಮಾನ ಸಿಕ್ಕು ಅವರು ರಾಜಕೀಯದಲ್ಲಿ ಸಕ್ರೀಯವಾಗಿ ಇರಬಹುದು. ಆದ್ರೆ ರಾಜ್ಯದ ಅಹಿಂದ ಜನರಿಗೆ ನ್ಯಾಯಯುತ ಸ್ಥಾನಮಾನ ಸೂಕ್ತ ರೀತಿಯಲ್ಲಿ ಸಿಗುವುದಿಲ್ಲ ಎಂದು ಬಿ.ಸುಬ್ರಹ್ಮಣ್ಯ ಆತಂಕ ವ್ಯಕ್ತಪಡಿಸಿದ್ದಾರೆ.
