ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಿಜೆಪಿಯು ವರ್ಷಗಳ ಕಾಲ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ, ಅವರ ಹೆಸರಿನಲ್ಲಿ ಮತ ಪಡೆದ ಬಿಜೆಪಿ ಮಂದಿರದ ದೇಣಿಗೆ ಹಣದ ಅಕ್ರಮ ಆರೋಪದ ಬಗ್ಗೆ ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಕೃಷ್ಣರಾಜ ಯೂತ್ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ ಎಂ ಆರ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಶ್ರೀರಾಮ ಮಂದಿರವು ಯಾವುದೇ ಒಂದು ಪಕ್ಷದ ಸ್ವತ್ತಲ್ಲ, ಅದು ಕೋಟ್ಯಂತರ ಭಾರತೀಯರ ನಂಬಿಕೆಯ ಪ್ರತೀಕ. ಭಕ್ತರು ಸಮರ್ಪಿಸಿದ ಹಣದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವಾಗ, ಬಿಜೆಪಿ ಮತ್ತು ಸಂಬಂಧಿತ ಆಡಳಿತ ಸಂಸ್ಥೆಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಭಕ್ತರ ಭಾವನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವವರು, ಅದೇ ಭಕ್ತರ ಹಣದ ಸುರಕ್ಷತೆ ಮತ್ತು ಪಾರದರ್ಶಕತೆಗೆ ಉತ್ತರದ್ವಾಯಿತ ಹೊರಬೇಕು. ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಲಾಭ ಪಡೆದವರು ಈಗ ಭಕ್ತರ ಹಣದ ಲೆಕ್ಕವನ್ನು ದೇಶದ ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದ ಸತ್ಯಾಂಶ ಬಹಿರಂಗಪಡಿಸಬೇಕು ಮತ್ತು ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಹೊಯ್ಸಳ ಎಂ ಆರ್ ಒತ್ತಾಯಿಸಿದ್ದಾರೆ.
ಧರ್ಮ ಮತ್ತು ದೇವರ ಹೆಸರಿನಲ್ಲಿ ಭ್ರಷ್ಟಾಚಾರ ಅಥವಾ ಅಕ್ರಮವನ್ನು ಯಾವ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
