ನವದೆಹಲಿ: ಉಕ್ಕು ಉತ್ಪಾದನೆಯಲ್ಲಿ ಮತ್ತಷ್ಟು ದಾಪುಗಾಲು ಇಡುವ ನಿಟ್ಟಿನಲ್ಲಿ 2035 ರ ಹೊತ್ತಿಗೆ 400 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಈಗಾಗಲೇ 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ತಲುಪುವ ನಿಟ್ಟಿನಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ.ಆ ನಂತರದ ಐದು ವರ್ಷಗಳಲ್ಲಿ 400 ದಶಲಕ್ಷ ಟನ್ ಉತ್ಪಾದಿಸುವ ಹೆಗ್ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ಉಕ್ಕು ವಲಯದಲ್ಲಿ ಡಿಜಿಟಲೀಕರಣ’ ಕುರಿತ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದ ಹೆಚ್.ಡಿ.ಕೆ, 400 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಕ್ಷೇತ್ರವನ್ನು ಮತ್ತಷ್ಟು ಆಧುನಿಕರಣಗೊಳಿಸುವ ಹಾಗೂ ಉಕ್ಕು ಕಾರ್ಖಾನೆಗಳಲ್ಲಿ ಡಿಜಿಟಲಿಕರಣ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ದೊಡ್ಡ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಿದರು
ಉತ್ಪಾದನೆಯಲ್ಲಿ ಕ್ಷಮತೆ, ವೇಗ, ಸುರಕ್ಷತೆ, ಗುರಿಗಳನ್ನು ನಿಗದಿತ ಕಾಲಕ್ಕೆ ಸರಿಯಾಗಿ ಮುಟ್ಟುವ ಉದ್ದೇಶದಿಂದ ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಉದ್ಯಮದ ದೀರ್ಘಕಾಲೀನ ಪ್ರಯೋಜನಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಉಪಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವರು
ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ 2047ರ ವೇಳೆಗೆ ವಿಕಸಿತ ಭಾರತ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಅನೇಕ ಪರಿವರ್ತನಾತ್ಮಕ ಕ್ರಮಗಳ ಬಗ್ಗೆ ತಿಳಿಸಿದ ಸಚಿವರು; ಉಕ್ಕು ವಲಯವು ಭಾರತದ ಆರ್ಥಿಕ ಪರಿವರ್ತನೆಯ ಕಾರ್ಯತಂತ್ರದ ಆಧಾರಸ್ತಂಭವಾಗಿದೆ, ಮೂಲಸೌಕರ್ಯ ಸೃಷ್ಟಿ, ಉತ್ಪಾದನೆ, ನವೀಕರಿಸಬಹುದಾದ ಇಂಧನ, ನಗರೀಕರಣ, ಸಾರಿಗೆ ಮತ್ತು ರಕ್ಷಣಾ ಉತ್ಪಾದನೆಗೆ ಶಕ್ತಿ ತುಂಬುತ್ತದೆ ಎಂದು ವಿವರಿಸಿದರು.
ಉಕ್ಕು ರಾಷ್ಟ್ರ ನಿರ್ಮಾಣದ ಬೆನ್ನೆಲುಬಾಗಿದೆ ಹಲವಾರು ಮುಂದುವರಿದ ದೇಶಗಳಲ್ಲಿ ಉಕ್ಕಿನ ಬೇಡಿಕೆ ಕಡಿಮೆಯಿದ್ದರೂ ಸಹ 2018ರಿಂದ ಭಾರತವು ಜಗತ್ತಿನ ಎರಡನೇ ಅತಿದೊಡ್ಡ ಉಕ್ಕಿನ ಉತ್ಪಾದಕನಾಗಿ ತನ್ನ ಸ್ಥಾನವನ್ನು ನಿರಂತರವಾಗಿ ಉಳಿಸಿಕೊಂಡಿದೆ ಎಂದು ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆ, ಮಿಷನ್ ಲರ್ನಿಂಗ್, ರೊಬೊಟಿಕ್ಸ್ ಮತ್ತು ಸುಧಾರಿತ ಡೇಟಾ ವಿಶ್ಲೇಷಣೆಗಳು ಜಾಗತಿಕವಾಗಿ ಉಕ್ಕಿನ ಉತ್ಪಾದನೆಯನ್ನು ಮರು ವ್ಯಾಖ್ಯಾನಿಸುತ್ತಿವೆ ಮತ್ತು ಭಾರತದಲ್ಲಿ ಇದನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಚಿಂತನ್ ಶಿಬಿರದಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಗಣಿಗಾರಿಕೆ ಪರಿಹಾರಗಳು, ಉಕ್ಕಿನ ಸ್ಥಾವರಗಳ ಡಿಜಿಟಲ್ ರೂಪಾಂತರ,ಪಿಎಂ ಗತಿಶಕ್ತಿ, ಕೈಗಾರಿಕೆ 4.O ಅನ್ವಯಿಕೆಗಳು ಮತ್ತು ಗಮನಾರ್ಹ ವ್ಯವಹಾರಿಕ ಪರಿಣಾಮಗಳನ್ನು ಪ್ರದರ್ಶಿಸುವ ಪ್ರಕರಣ ಅಧ್ಯಯನಗಳು ಕುರಿತು ವಿಷಯಾಧಾರಿತ ಚರ್ಚೆಗಳು ನಡೆದವು.
