ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ತರಾತಲಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ನಿರ್ಮಾಣ ಹಂತದ ಮೂರು ಅಂತಸ್ತಿನ ಗೋದಾಮು ಕುಸಿದು ಬಿದ್ದು, 9 ಮಂದಿ ಮೃತಪಟ್ಟಿದ್ದಾರೆ.
ಈ ಅವಘಡದಲ್ಲಿ 18 ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಇನ್ನೂ 18 ಜನ ಅವಶೇಷಗಳಡಿಯಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯ ನಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಕೋಲ್ಕತ್ತಾ ಪೊಲೀಸರು, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ಪಡೆ ಹಾಗೂ ನಾಗರಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ತರಾತಲಾ ಪ್ರದೇಶದ ಬ್ರೇಸ್ ಸೇತುವೆ ಬಳಿಯ ಸಾರಿಗೆ ಡಿಪೋ ರಸ್ತೆಯಲ್ಲಿರುವ ಗೋದಾಮಿನ ಛಾವಣಿ ಬುಧವಾತ ಮಧ್ಯಾಹ್ನ ಕುಸಿದು ಬಿದ್ದಿದೆ,ಆ ಸಮಯದಲ್ಲಿ ಕೆಲವರು ಅಲ್ಲಿ ಕೆಲಸ ಮಾಡುತ್ತಿದ್ದರು. ಹಲವಾರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಿರ್ಮಾಣ ಕಾರ್ಯದ ಸಮಯದಲ್ಲಿ ಕಬ್ಬಿಣದ ಕಂಬಗಳು ಮತ್ತು ಕಾಂಕ್ರೀಟ್ನ ದೊಡ್ಡ ಭಾಗಗಳು ಕುಸಿದು ಬಿದ್ದಿದೆ.
ಮೊದಲ ಮತ್ತು ಎರಡನೇ ಮಹಡಿಗಳಿಗೆ ಆರ್ಸಿಸಿ ರಚನೆ ಪೂರ್ಣಗೊಂಡಾಗ ನೆಲ ಮಹಡಿಯಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದವು. ಇಡೀ ರಚನೆ ಕುಸಿದಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಗೋದಾಮು ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಸೇನಾ ಸಿಬ್ಬಂದಿ ಕೂಡ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದು, ಭಾರೀ ಕಬ್ಬಿಣದ ಕಂಬಗಳು ಹಾಗೂ ಕಟ್ಟಡದ ವಸ್ತುಗಳನ್ನು ಕ್ರೇನ್ಗಳ ಸಹಾಯದಿಂದ ತೆರವುಗೊಳಿಸಲಾಗುತ್ತಿದೆ.
ಮೇಲ್ಛಾವಣಿ ಕುಸಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
