ಯಾದಗಿರಿ: ಎಸ್.ಬಿಸಿ ಕಾಲುವೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರು ಪಾಲಾದ ಘಟನೆ ಶಹಾಪೂರ ನಗರದಲ್ಲಿ ನಡೆದಿದೆ.
ಜಿಲ್ಲೆಯ ಶಹಾಪೂರ ನಗರದ ಸಮೀಪದ ಭೀ.ಗುಡಿಯ ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಬೋರುಕಾ ಪವರ್ ಪ್ಲಾಂಟ್ ಬಳಿ ಎಸ್.ಬಿಸಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ.
ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿ ಹರೀಶರಡ್ಡಿ ಕಾರಟಗಿ (೨೦) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ.
ವಿದ್ಯಾಲಯದ ಪ್ರಥಮ ಸೆಮಿಷ್ಟರ್ ವಿದ್ಯಾರ್ಥಿಗಳಾದ ಹರೀಶರಡ್ಡಿ, ಅಮರೇಶಗೌಡ, ದೇವರಾಜ ಕಾಲೇಜಿಗೆ ಸಮೀಪದ ಬೋರುಕಾ ಪವರ್ ಪ್ಲಾಂಟ್ ಹತ್ತಿರ ಕಾಲುವೆಯಲ್ಲಿ ಈಜಲು ಹೋಗಿದ್ದಾರೆ.
ಸರಿಯಾಗಿ ಈಜಲು ಬಾರದ ಹರೀಶರಡ್ಡಿ ನೀರಿನ ಮಧ್ಯದಲ್ಲಿ ಸಿಲುಕಿದ್ದಾನೆ. ಆಗ ಉಳಿದ ಇಬ್ಬರು ವಿದ್ಯಾರ್ಥಿಗಳು ರಕ್ಷಿಸಲು ಮುಂದಾದರೂ ಸಹ ನೀರಿನ ರಭಸದಲ್ಲಿ ಹರೀಶರಡ್ಡಿ ಕೊಚ್ಚಿ ಹೋಗಿದ್ದಾನೆ.
ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಶವ ಶೋಧ ಕಾರ್ಯ ಕೈಗೊಂಡರು.
ಭೀಮರಾಯನಗುಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
