ಬೆಂಗಳೂರು: ಬೆಂಗಳೂರಿನ ಕೆ. ಆರ್. ಪುರಂ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರ ವಾರ್ಡಿನ ಆಮ್ ಆದ್ಮಿ ಪಕ್ಷದ ಅಧ್ಯಕ್ಷೆ ಸತ್ಯ ವಾಣಿ ಅವರ ಕಾರನ್ನು ಜಖಂ ಗೊಳಿಸಿದ ಬಿಜೆಪಿ ಸ್ಥಳೀಯ ಮುಖಂಡರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ದೂರನ್ನು ಸಲ್ಲಿಸಲಾಯಿತು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯವಾಣಿ ಅವರು, ಕಳೆದ ತಿಂಗಳು ಇದೇ ರೀತಿ ನನ್ನ ಮನೆ ಮುಂದೆ ಹಾಗೂ ವಿಜ್ಞಾನ ನಗರ ವಾರ್ಡಿನಾದ್ಯಂತ ನನ್ನ ವಿರುದ್ಧ ಇಲ್ಲಸಲ್ಲದ ಅವಹೇಳನಕಾರಿ ಸಂದೇಶಗಳು ಇರುವ 50 ದೊಡ್ಡ ಫ್ಲೆಕ್ಸ್, ಬ್ಯಾನರ್ ಗಳನ್ನು ಮುದ್ರಿಸಿ ಕ್ಷೇತ್ರದಾದ್ಯಂತ ಅಳವಡಿಸಿದ್ದರು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಹೀಗೆ ಮಾಡುವ ಮೂಲಕ ನನ್ನ ಚಾರಿತ್ರ್ಯ ವದೆಗೆ ನೇರವಾಗಿ ಶಾಸಕರು ಇಳಿದಿದ್ದಾರೆ ಎಂದು ಬೈರತಿ ಬಸವರಾಜು ವಿರುದ್ಧ ಸತ್ಯವಾಣಿ ಗಂಭೀರ ಆರೋಪ ಮಾಡಿದರು.
ಸ್ಥಳೀಯ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಬಿಡದೆ ಶಾಸಕರು ಸಾಕಷ್ಟು ಒತ್ತಡ ತಂತ್ರಗಳನ್ನು ಹೇರಿದ್ದರು. ಕೊನೆಗೂ ಲೋಕಾಯುಕ್ತರ ಬಳಿ ದೂರನ್ನು ನೀಡಿದ ನಂತರ ಲೋಕಾಯುಕ್ತರ ಆದೇಶದಂತೆ ಪೊಲೀಸರು ಮೊಕದ್ದಮೆಯನ್ನು ದಾಖಲಿಸಿದರು ಎಂದು ಮಾಹಿತಿ ನೀಡಿದರು.
ಆ ಸಂದರ್ಭದಲ್ಲಿ ಶಾಸಕರ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಆಗಲಿಲ್ಲ. ಕೆ ಆರ್ ಪುರ ಕ್ಷೇತ್ರದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇರದಂತಹ ವಾತಾವರಣ ಸೃಷ್ಟಿ ಆಗಿರುವುದು ಈ ಪ್ರಕರಣದಿಂದ ಎದ್ದು ಕಾಣುತ್ತಿದೆ. ಶಾಸಕರ ಆಣತಿಯಂತೆ ಪೊಲೀಸರು ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸತ್ಯವಾಣಿ ಟೀಕಿಸಿದರು.
ಶಾಸಕರ ಬೆಂಬಲಿಗರು ನಿನ್ನೆ ರಾತ್ರಿ ನನ್ನ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಸಂಪೂರ್ಣ ಜಖಂ ಗೊಳಿಸಿದ್ದಾರೆ. ಶಾಸಕರ ಬೆಂಬಲಿಗರು ಈ ರೀತಿಯ ಹೀನ ಕೃತ್ಯಗಳಿಗೆ ಕೈ ಹಾಕಿರುವುದು ನಿಜಕ್ಕೂ ಮಹಿಳೆಯರು ಸುರಕ್ಷಿತವಾಗಿ ವಾಸಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಾನು ಹಲವು ವರ್ಷಗಳಿಂದ ಕೆರೆ ಒತ್ತುವರಿದಾರರ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದಾದ್ಯಂತ ಅನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಯತ್ನಗಳನ್ನು ಮಾಡುತ್ತೇನೆ. ಈಗ ಜಿಬಿಎ ಚುನಾವಣೆ ಹತ್ತಿರ ಬಂದಿರುವ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆಗಳನ್ನು ನಡೆಸಿಕೊಂಡಿರುವ ನನ್ನ ವಿರುದ್ಧ ಈ ರೀತಿಯ ಹಿಂಸಾ ಕೃತ್ಯಗಳನ್ನು ಮುಂದುವರಿಸಿದ್ದಾರೆ. ನನ್ನ ಪ್ರಾಣ ಹತ್ಯೆಯಾದರೆ ಶಾಸಕ ಭೈರತಿ ಬಸವರಾಜ ಅವರೆ ನೇರ ಹೊಣೆಗಾರರಾಗುತ್ತಾರೆ ಎಂದು ಸತ್ಯವಾಣಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಪಕ್ಷದ ಮುಖಂಡರುಗಳಾದ ವೀಣಾ ಸರಾವ್ , ಅಶೋಕ್ ಮೃತ್ಯುಂಜಯ, ಮುನೇಶ್ .ಎಂ, ಅಣ್ಣ ನಾಯಕ್, ನವೀನ್ ಅಯ್ಯರ್, ಮೋಹನ್ ರಾಜ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.
