ಮೈಸೂರು: ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ರನ್ನು ತಕ್ಷಣ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂದು ವೇಳೆ ಅಮಾನತು ಮಾಡದಿದ್ದರೆ ತಾಲೂಕು ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ರಮ್ಮನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಅರವಿಂದ್ ಶರ್ಮ, ರಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್ 259/5 (ಹಳೆ ಸರ್ವೆ ನಂಬರ್ 259/3)ರ 20.08 ಗುಂಟೆ ಜಮೀನು ಸರ್ಕಾರದ ಜಮೀನು. ಈ ಜಮೀನಿನಲ್ಲಿ ಅಕ್ರಮವಾಗಿ ರಚನೆ ಮಾಡಿರುವ ಲೇಔಟ್ಗೆ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಭೂಮಾಫಿಗಳಾದ ಫಾಸಿಲ್ ಬೇಗ್ ಹಾಗೂ ವಹೀದ್ ಅಖ್ತರ್ ಖಾನ್ ಅರೊಂದಿಗೆ ಸೇರಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು
ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸಾಕಷ್ಟು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಪರಿಣಾಮ ಇದೀಗ ಸರ್ಕಾರಿ ಜಮೀನಿನಲ್ಲಿ ರಚನೆ ಮಾಡಿರುವ ೫ ನಿವೇಶನಗಳನ್ನು ಅಮಾಯಕರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಅಮಾಯಕರು ತಾವು ಜೀವಮಾನದಲ್ಲಿ ಕೂಡಿಟ್ಟಿರುವ ಲಕ್ಷಾಂತರ ರೂಪಾಯಿ ಹಣವನ್ನ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಏಪ್ರಿಲ್ ೨೮ರಂದು ಭ್ರಷ್ಟ ಮಂಜುನಾಥ್ ರನ್ನು ಸರ್ಕಾರ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಯಿಂದ ಮಾತೃ ಇಲಾಖೆಗೆ ಎತ್ತಂಗಡಿ ಮಾಡಿದೆ. ಆದರೆ ಮತ್ತಷ್ಟು ಅಕ್ರಮ ಖಾತೆ ಮಾಡಿಕೊಡಲು ಭೂಮಾಫಿಯಾದವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭ್ರಷ್ಟ ಮಂಜುನಾಥ್ ನ್ಯಾಯಾಲಯದ ಮೆಟ್ಟಿಲು ಹತ್ತಿ ಇಲ್ಲಿಯೆ ಉಳಿದುಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಹೇಳಿದರು.
ಭ್ರಷ್ಟ ಮಂಜುನಾಥ್ ರಮ್ಮನಹಳ್ಳಿ ಗ್ರಾಮದಲ್ಲಿಯೆ ಮುಂದುವರೆದರೆ ಈ ಹಿಂದೆ ಮಾಡಿರುವ ಅಕ್ರಮ ಖಾತೆಗಳ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದ್ದು, ಮತ್ತಷ್ಟು ಸರ್ಕಾರಿ ಜಮೀನುಗಳನ್ನು ಭೂಮಾಫಿಯಾದವರ ಪಾಲು ಮಾಡಲಿದ್ದಾರೆ. ಆದ್ದರಿಂದ ಈ ಕೂಡಲೆ ಸರ್ಕಾರಿ ಜಮೀನುಗಳನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿರುವ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿ ಮಹೇಶ್, ಕಂದಾಯ ನಿರೀಕ್ಷಕ ಮಂಜುನಾಥ್ ರನ್ನು ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಸರ್ಕಾರಿ ಜಮೀನನ್ನು ಮಾರಾಟ ಮಾಡಿರುವ ಕೆಂಚಯ್ಯರ ಮಕ್ಕಳಾದ ದೇವರಾಜು, ಸುಂದ್ರಮ್ಮ, ಸರ್ಕಾರಿ ಜಮೀನಿನಲ್ಲಿ ಲೇಔಟ್ ಮಾಡಿ ಅದನ್ನು ಅಮಾಯಕರಿಗೆ ಮಾರಾಟ ಮಾಡಿರುವ ಫಾಸಿಲ್ ಬೇಗ್ ಹಾಗೂ ವಹೀದ್ ಅಖ್ತರ್ ಖಾನ್ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅರವಿಂದ್ ಶರ್ಮ ಆಗ್ರಹಿಸಿದರು.
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ದೂರು ನೀಡಿ ಸಾಕಷ್ಟು ದಿನಗಳು ಕಳೇದರೂ ಯಾವುದೇ ಕ್ರಮವಾಗದಿರುವುದನ್ನು ಗಮನಿಸಿದರೆ ಹಿರಿಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರಬಹುದೆಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ಈ ಕೂಡಲೆ ಅಕ್ರಮದಲ್ಲಿ ಭಾಗಿಯಾಗುವವರ ಮೇಲೆ ಕಾನೂನು ಕ್ರಮವಾಗದಿದ್ದರೆ ತಾಲೂಕು ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುತ್ತೇವೆ. ಅಲ್ಲದೆ ಹಿರಿಯ ಅಧಿಕಾರಿಗಳನ್ನೂ ಸೇರಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಚೆಲುವಯ್ಯ, ಮಹದೇವು, ಸುರೇಶ್, ಆಡಿಟರ್ ಸುರೇಶ್ ಹಾಜರಿದ್ದರು.
