ಬೆಂಗಳೂರು: ವೈದ್ಯಕೀಯ ಶಿಕ್ಷಣವನ್ನು ಸರ್ಕಾರಿ ಹಾಗೂ ಸರ್ಕಾರಿ ಕೋಟಾ ಮೂಲಕ ಕಡಿಮೆ ವೆಚ್ಚದಲ್ಲಿ ಪಡೆದು ಹೊರಬರುವ ಸಾವಿರಾರು ಎಂಬಿಬಿಎಸ್ ವೈದ್ಯರು ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವ್ಯವಸ್ಥೆಯನ್ನು ಇನ್ನಾ ಒಂದು ವರ್ಷ ಕಡ್ಡಾಯಗೊಳಿಸಬೇಕೆಂದು ಆಪ್ ಆಗ್ರಹಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಇಂದಿಗೂ ಗಂಭೀರ ಸಮಸ್ಯೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಸಮರ್ಪಕ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಹೇಳಿದ್ದಾರೆ.
ರಾಜ್ಯ ಸರ್ಕಾರ ಆರ್ಥಿಕ ಹೊರೆ, ಹುದ್ದೆಗಳ ಕೊರತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಸೇವಾ ನೀತಿಯನ್ನು ದುರ್ಬಲಗೊಳಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ವೈದ್ಯಕೀಯ ಶಿಕ್ಷಣ ಪಡೆದು ಹೊರಬರುವ ವೈದ್ಯರು ಸಮಾಜಕ್ಕೆ ಕನಿಷ್ಠ ಒಂದು ವರ್ಷದ ಸೇವೆ ಸಲ್ಲಿಸುವುದು ನ್ಯಾಯಸಮ್ಮತ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕ್ರಮವಾಗಿದೆ. ಕೂಡಲೇ ಈ ಬಗ್ಗೆ ಶೀಘ್ರಕ್ರಮ ತೆಗೆದುಕೊಳ್ಳಬೇಕೆಂದು ನೂತನ ಆರೋಗ್ಯ ಸಚಿವ ಯುಟಿ ಖಾದರ್ ಅವರನ್ನು ಆಪ್ ಪರವಾಗಿ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಕೂಡ ಗ್ರಾಮೀಣ ಸೇವೆಯ ಮೂಲ ಉದ್ದೇಶವನ್ನು ಪ್ರಶ್ನಿಸಿಲ್ಲ, ಕೇವಲ ನಿಯಮಗಳ ಪ್ರಕಟಣೆಗೆ ಸಂಬಂಧಿಸಿದ ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳಿಗೆ ವಿನಾಯಿತಿ ನೀಡಿದೆ. ಹಾಗಾಗಿ ಗ್ರಾಮೀಣ ಸೇವೆಯ ಅಗತ್ಯತೆ ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
ಇಂದು ರಾಜ್ಯದ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳು ವೈದ್ಯರ ಕೊರತೆಯಿಂದ ಬಳಲುತ್ತಿವೆ.
ಇದರಿಂದಾಗಿ ಗ್ರಾಮೀಣ ಭಾಗದ ಜನರು ಸಣ್ಣ ಚಿಕಿತ್ಸೆಗಳಿಗೂ ನಗರಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬಡ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀರುತ್ತಿದೆ.
ಇನ್ನೊಂದೆಡೆ, ಗ್ರಾಮೀಣ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ತಿಂಗಳುಗಟ್ಟಲೆ ಸಂಬಳ ಪಾವತಿಸಲು ವಿಳಂಬವಾಗಿರುವ ವರದಿಗಳು ಹೊರಬಂದಿವೆ.
ಆರೋಗ್ಯದಂತಹ ಅತ್ಯಂತ ಮಹತ್ವದ ಕ್ಷೇತ್ರದಲ್ಲಿಯೇ ಸೇವೆ ಸಲ್ಲಿಸುವ ವೈದ್ಯರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗದಿರುವುದು ರಾಜ್ಯ ಸರ್ಕಾರದ ಆರ್ಥಿಕ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಇಂತಹ ನಿರ್ಲಕ್ಷ್ಯವು ವೈದ್ಯರ ಮನೋಬಲ ಕುಗ್ಗಿಸುವುದರ ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೂ ದುರ್ಬಲಗೊಳಿಸುತ್ತದೆ ಎಂದು ತಿಳಿಸಿದರು.
ರಾಜ್ಯದ ಬಡ ಮತ್ತು ಸಾಮಾನ್ಯ ಜನರ ಜೀವ ರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಆದರೆ ವೈದ್ಯರ ಕೊರತೆ, ಆರೋಗ್ಯ ಮೂಲಸೌಕರ್ಯಗಳ ಅಭಾವ ಹಾಗೂ ಸೇವಾ ವ್ಯವಸ್ಥೆಯಲ್ಲಿನ ಲೋಪಗಳಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗುತ್ತಿದೆ. ಅನೇಕ ಕಡೆಗಳಲ್ಲಿ ತುರ್ತು ಚಿಕಿತ್ಸೆಯ ಕೊರತೆಯಿಂದ ಅಮೂಲ್ಯ ಜೀವಗಳು ಅಪಾಯಕ್ಕೆ ಸಿಲುಕುತ್ತಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲೇ ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ತಕ್ಷಣ ಮಧ್ಯಪ್ರವೇಶಿಸಿ ಎಂಬಿಬಿಎಸ್ ವೈದ್ಯರಿಗೆ ಒಂದು ವರ್ಷದ ಗ್ರಾಮೀಣ ಸೇವೆಯನ್ನು ಪರಿಣಾಮಕಾರಿಯಾಗಿ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಗ್ರಾಮೀಣ ಸೇವೆಯಲ್ಲಿರುವ ವೈದ್ಯರಿಗೆ ಸಂಬಳ ಮತ್ತು ಭತ್ಯೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಬಡ ಮತ್ತು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ವಿಶೇಷ ಕಾರ್ಯಯೋಜನೆ ರೂಪಿಸಬೇಕು. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಜಗದೀಶ್ ವಿ ಸದಂ ಆಗ್ರಹಿಸಿದರು.
