ಮಂಡ್ಯ: ಸರ್ಕಾರಿ ಶಾಲೆ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಮಂಡ್ಯ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ರಾಜ್ಯ ಶಾಲಾಭಿವೃದ್ಧಿ ಸಮಿತಿ ಸಂಘಗಳ ಸಹಯೋಗದಲ್ಲಿ ಏ.೧೧ರಂದು ಆರಂಭವಾದ ಐತಿಹಾಸಿಕ ೧,೨೯೫ ಕಿ.ಮೀ. ಪಾದಯಾತ್ರೆಯು ೧೭ ದಿನಗಳನ್ನು ಪೂರೈಸಿದೆ.
ಈಗಾಗಲೇ ಪಾದಯಾತ್ರೆಯು ಸುಮಾರು ೪೫೦ ಕಿ.ಮೀ ಪೂರೈಸಿದ್ದು, ೨೫೦ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಪರಾಮರ್ಶಿಸಿ, ಗ್ರಾಮಸ್ಥರ ಸಲಹೆ, ಅವರ ಬೇಡಿಕೆಗಳು ಹಾಗೂ ಶಿಕ್ಷಣ ಇಲಾಖೆ ಹೇಗೆ ಸ್ಪಂದಿಸುತ್ತಿದೆ ಎಂಬುದರ ಮಾಹಿತಿ ಕಲೆಹಾಕಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದೆ.
ಏಕರೂಪ ಸಮಾನ ಶಿಕ್ಷಣ, ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿಯಿಂದ ೫ನೇ ತರಗತಿವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್ಇ ಶಿಕ್ಷಣ, ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೬ನೇ ತರಗತಿಯಿಂದ ಪಿಯುಸಿವರೆಗೆ ನವೋದಯ ಮಾದರಿ ಸಿಬಿಎಸ್ಇ ವಸತಿ ಶಿಕ್ಷಣ ನೀಡಬೇಕು ಎಂಬ ವಿಚಾರಗಳನ್ನು ಸ್ಥಳೀಯರಿಗೆ ತಿಳಿಹೇಳಿ ಜಾಗೃತಿ ಮೂಡಿಸಲಾಗುತ್ತಿದೆ.
ಗುಣಮಟ್ಟದ ಶಿಕ್ಷಣದ ಹುಡುಕಾಟದಲ್ಲಿ ಜನಸಾಮಾನ್ಯರಿಗೆ, ರೈತಾಪಿ ವರ್ಗದವರಿಗೆ ಅನಗತ್ಯವಾಗಿ ಆಗುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ಇರುವ ಏಕೈಕ ಮಾರ್ಗ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿರುವ ಅಗತ್ಯಗಳನ್ನು ತಿಳಿಸಿಕೊಡಲಾಗುತ್ತಿದೆ.
ಉತ್ತಮ ಶಾಲೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿ ಕುಂದುಕೊರತೆ ಇರುವ ಶಾಲೆಗಳ ಚಿತ್ರಣವನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದು ಅಗತ್ಯ ಸೌಕರ್ಯಗಳನ್ನು ಒದಗಿಸಿದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಪಾದಯಾತ್ರಿಗಳ ಆಶಯವಾಗಿದೆ.
ಇನ್ನೂ ೩೦ಕ್ಕೂ ಹೆಚ್ಚು ದಿನಗಳ ಪಾದಯಾತ್ರೆ ಬಾಕಿ ಇದೆ. ಹಾಗಾಗಿ ಈ ತಂಡ ನಿಮ್ಮ ಊರುಗಳನ್ನು ಹಾದು ಹೋಗುವ ಸಂದರ್ಭದಲ್ಲಿ ವಾಸ್ತವ್ಯ, ದೇಣಿಗೆ, ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ನಮ್ಮ ಜವಾಬ್ದಾರಿ ನಿಭಾಯಿಸಲು ಸಹಕರಿಸಬೇಕು ಎಂದು ಹಿರಿಯ ರೈತ ಮುಖಂಡ ಇಂಡುವಾಳು ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಪಾದಯಾತ್ರೆಯ ನೇತೃತ್ವ ವಹಿಸಿರುವ ಧನುಷ್ಗೌಡ, ಸಂತೋಷ್ ಮಂಡ್ಯ ಗೌಡ ಮತ್ತಿತರರು ಸರ್ಕಾರಿ ಶಾಲೆಗಳ ಅಗತ್ಯತೆ ಕುರಿತು ಗ್ರಾಮಸ್ಥರ ಅಭಿಪ್ರಾಯ ದಾಖಲಿಸುತ್ತ ಸಾಗಿದ್ದಾರೆ.
ಪಾದಯಾತ್ರೆ ತಂಡದಲ್ಲಿ ಸಂತೋಷ್ ಮಂಡ್ಯಗೌಡ, ಇಂಡುವಾಳು ಚಂದ್ರಶೇಖರ್, ಧನುಷ್ಗೌಡ, ತೇಜಸ್, ಹುಬ್ಬಳ್ಳಿಯ ರವಿಚಂದ್ರ, ಪ್ರಚಾರ ವಾಹನದ ಸಾರಥಿ ಕೃಷ್ಣೇಗೌಡ, ಕೆ.ಆರ್. ಎಸ್. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ಕುಮಾರ್, ಮಲ್ಲೇಗೌಡ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ, ತಾಲ್ಲೂಕು ಕಾರ್ಯದರ್ಶಿ ಮಲ್ಲೇಶ ಪಾಲ್ಗೊಂಡಿದ್ದಾರೆ.
