ಮೈಸೂರು: ಕುಡಿಯುವ ನೀರಿನ ಮಾದರಿ ಪರಿಶೀಲಿಸಿದಾಗ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಿಷನ್ ಸಭೆಯಲ್ಲಿ ಮಾತನಾಡಿದ ಅವರು
ಕ್ರಮ ಕೈಗೊಂಡ ನಂತರ ಅದೇ ಸ್ಥಳದಲ್ಲಿ ಮತ್ತೆ ಕುಡಿಯುವ ನೀರಿನ ಮಾದರಿಯನ್ನು ಪರಿಶೀಲಿಸಿ, ಯೋಗ್ಯವಾದ ಕುಡಿಯುವ ನೀರು ಸರಬರಾಜಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕುಡಿಯುವ ನೀರು ಕಲುಷಿತವಾದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಕುಡಿಯುವ ನೀರಿನ ಪರಿಶೀಲನೆಯ ಬಗ್ಗೆ ಹೆಚ್ಚು ನಿಗಾ ವಹಿಸಿ ಎಂದು ಆದೇಶಿಸಿದರು.
ಕೋಟ್ಪ್ ಕಾಯ್ದೆಯಡಿ ದಾಳಿ ನಡೆಸಿ ಸೆಕ್ಷನ್ 4 ರಡಿ ಏಪ್ರಿಲ್ 2025 ರಿಂದ 2026 ರವರಗೆ 2,98,400 ರೂ ದಂಡ ಸಂಗ್ರಹಿಸಲಾಗಿದೆ. ಇದು ಉತ್ತಮ ಕೆಲಸವಾಗಿದೆ, ಇನ್ನೂ ಹೆಚ್ಚಿನ ದಾಳಿಯನ್ನು ನಡೆಸಿ. ಹುಕ್ಕವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಡಿಸಿ ನಿರ್ದೇಶಿಸಿದರು.
ಮಕ್ಕಳಿಗೆ ನೀಡಲಾಗುವ ಲಸಿಕೆ ಹಾಗೂ ಇನ್ನಿತರೆ ಮಾಹಿತಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾರು ನಿಗದಿತ ಅವಧಿಯಲ್ಲಿ ನೀಡಲಾಗಿರುವ ಆ್ಯಪ್ ಗಳಲ್ಲಿ ಅಪ್ ಡೇಟ್ ಆಗಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಬಾಲ ಸ್ವಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಮಕ್ಕಳ ಸ್ಕ್ರೀನಿಂಗ್ ನಡೆದ ನಂತರ ಅವರಿಗೆ ಬೇಕಿರುವ ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹೆಚ್ಚಿಗೆ ಇದ್ದೆ ಇಲ್ಲಿ ತೀವ್ರ ನಿಗಾ ವಹಿಸಿ ಎಂದು ಜಿಲಗಲಾಧಿಕಾರಿಗಳು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾಬಾಧಿಕಾರಿ ಡಾ; ಸಿರಾಜ್ ಅಹಮದ್, ಡಾ: ಗೋಪಿನಾಥ್, ಡಾ: ನಾಗರಾಜ್, ಡಾ: ಬೃಂದ, ಡಾ: ಸುವರ್ಣ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
