ಸರಗೂರು: ಸರಗೂರು ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರಿಗೆ ನೀಡಬೇಕಾಗಿರುವ ವೀಲ್ ಚೇರ್ಗಳು ಸ್ಟ್ರೆಚರ್ ಗಳು ತುಕ್ಕು ಹಿಡಿದು ಹಾಳಾಗುತ್ತಿವೆ.
ಸುಮಾರು ಒಂದು ವರ್ಷದಿಂದ ಸರಗೂರು ತಾಲೂಕು ಪಂಚಾಯಿತಿ ಆವರಣದಲ್ಲಿ ವೀಲ್ ಚೇರ್ ಗಳು ನಿಂತಲ್ಲೇ ನಿಂತಿವೆ.ಸ್ಟ್ರೆಚರ್ ಗಳು ಕೂಡಾ ವಿತರಣೆ ಮಾಡದೆ ಹಾಗೇಯ ಉಳಿದಿವೆ.
ಜೋರು ಮಳೆ ಬಂದಾಗ ನೀರು ತಾಗುತ್ತದೆ.ಬಿಸಿಲು,ಮಳೆಗೆ ಹಾಳಾಗುತ್ತಿವೆ ಇದುವರೆಗೂ ಒಂದು ಚೇರನ್ನೂ ವಿಕಲಚೇತನರಿಗೆ ವಿತರಿಸಿಲ್ಲ. ಸರ್ಕಾರದ ದುಡ್ಡು ಹೀಗೆ ಸುಖಾ ಸುಮ್ಮನೆ ಪೋಲಾಗುತ್ತಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯಿತಿ ಇಒ ಪ್ರೇಮ್ ಕುಮಾರ್ ಅವರು ಶಾಸಕರಾಗಲಿ ಅಥವಾ ಲೋಕಸಭಾ ಸದಸ್ಯರಿಂದಾಗಲಿ ವಿತರಣೆ ಮಾಡಿಸೋಣ ಎಂದುಕೊಂಡೆವು ಆದರೆ ಅವರ ಟೈಮ್ ಸಿಗುತ್ತಿಲ್ಲ ಎಂದಿದ್ದಾರೆ.
ಹೀಗೆ ಜನಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ ಎಂಬ ನೆಪವೊಡ್ಡಿ ವಿಕಲಚೇತನರಿಗೆ ಜರೂರಾಗಿ ಬೇಕಾದಂತಹ ಸಲಕರಣೆಗಳು ತುಕ್ಕು ಹಿಡಿದು ಹಾಳಾಗುವಂತೆ ಮಾಡುವುದು ಎಷ್ಟು ಸರಿ ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.
ಶಾಸಕರ ಅನುದಾನವಾಗಲಿ ಸಂಸದರ ಅನುದಾನ ವಾಗಲಿ ಹೀಗೆ ಸಲಕರಣೆಗಳನ್ನು ತರಿಸಿ ಹಾಳು ಮಾಡುವುದು ಸರಿಯಲ್ಲ ಕೂಡಲೇ ವೀಲ್ ಚೇರ್ ಮತ್ತು ಸ್ಟ್ರಚರ್ ಗಳನ್ನು ಅರ್ಹರಿಗೆ ವಿತರಣೆ ಮಾಡಲೇಬೇಕು ಇಲ್ಲದಿದ್ದರೆ ತಾಲೂಕು ಪಂಚಾಯಿತಿ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
