(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಜಗದ್ ವಿಖ್ಯಾತ ಗಗನಚುಕ್ಕಿ ಬರಚುಕ್ಕಿ ಜಲಪಾತ ಗಳು ಸೇರಿದಂತೆ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ ಶಿವನಸಮುದ್ರ ವಿಶಿಷ್ಠ ಕ್ಷೇತ್ರ ಎಂದು ಶಾಸಕ ಎಂ.ಆರ್ ಮಂಜುನಾಥ್ ಬಣ್ಣಿಸಿದರು.
ಮುಂದಿನ ದಿನಗಳಲ್ಲಿ ದೇವಾಲಯದ ಸಮಗ್ರ ಅಭಿವೃದ್ಧಿ ಮಾಡಿ ಉನ್ನತ ಮಟ್ಟಕ್ಕೆ ಕೊಂಡೊಯುವುದಾಗಿ ಶಾಸಕರು ಭರವಸೆ ನೀಡಿದರು.
ತಾಲೂಕಿನ ಶಿವನಸಮುದ್ರದ ಸಾಮೂಹಿಕ ದೇವಾಲಯಗಳಲ್ಲೊಂದಾದ ಮಧ್ಯರಂಗ ಖ್ಯಾತಿಯ ಭೂ ನೀಳಾ ಶ್ರೀ ರಂಗನಾಯಕಿ ಅಮ್ಮನವರ ಸಮೇತ ಶ್ರೀ ಜಗನ್ಮೋಹನ ರಂಗನಾಥ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸರ್ಕಾರವೇ ಬಂದು ದೇವಾಲಯವನ್ನು ಲೋಕಾರ್ಪಣೆ ಮಾಡಿದೆ, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಶಾಸಕರಾದ ಎ.ಆರ್ ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಯಾರೂ ಊಹೆ ಮಾಡದ ರೀತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಆ ಮೂಲಕ ನಾವೆಲ್ಲರೂ ದೇವರ ಕೃಪೆಗೆ ಪಾತ್ರರಾಗಿದ್ದೇವೆ ಎಂದು ತಿಳಿಸಿದರು.
ರಂಗನಾಯಕಿ ಅಮ್ಮನವರ ದೇವಾಲಯ ಜೀರ್ಣೋದ್ಧಾರ ಕಾರ್ಯನ್ನು ಶ್ರೀರಂಗ ನಾಯಕಿ ಅಮ್ಮನವರ ದೇವಾಲಯ ನಿರ್ಮಾಣದ ದಾನಿಗಳಾದ ಎ ಎಂ ಆರ್ ಗ್ರೂಪ್ ನ ಚೇರ್ಮೆನ್ ಮಹೇಶ್ ರೆಡ್ಡಿ, ಶ್ರೀಮತಿ ರಾಧಿಕಾರೆಡ್ಡಿ ಮಾಡಿಕೊಟ್ಟಿದ್ದಾರೆ ಅವರಿಗೆ ಜಿಲ್ಲಾಡಳಿತ ಪರವಾಗಿ ಹಾಗೂ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು
ಈ ದೇವಾಲಯವು ಇಷ್ಟು ಸುಂದರವಾಗಿ ಹೊರಹೊಮ್ಮಲು ತಾಲೂಕು ಹಾಗೂ ಜಿಲ್ಲಾಡಳಿತದ ಪರಿಶ್ರಮವಿದೆ. ತಹಸಿಲ್ದಾರ್ ಬಸವರಾಜು ಹಾಗೂ ಸಾಮೂಹಿಕ ದೇವಾಲಯಗಳ
ಕಾರ್ಯನಿರ್ವಹಣಾಧಿಕಾರಿ ಸುರೇಶ್ ವಿಶೇಷ ಕಾಳಜಿ ವಹಿಸಿದ್ದಾರೆ ಇಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನವಾಗಿ ಲೋಕಾರ್ಪಣೆಗೊಂಡಿರುವ ದೇವಾಲಯದಲ್ಲಿ ಇನ್ನು ಮುಂದೆ 68 ದಿನಗಳ ಕಾಲ ಶಾಸ್ತ್ರೋತ್ತವಾಗಿ ಪೂಜೆ ಪುನಸ್ಕಾರಗಳು ನಡೆಯಲಿದೆ ಎಂದು ಮಂಜುನಾಥ್ ತಿಳಿಸಿದರು
ಆದಿರಂಗ (ಶ್ರೀರಂಗಪಟ್ಟಣ) ಮಧ್ಯರಂಗ (ಶಿವನಸಮುದ್ರ) ಅಂತ್ಯರಂಗ (ತಮಿಳುನಾಡಿನ ಶ್ರೀರಂಗಂ) ಇವು ರಂಗನಾಥ ಸ್ವಾಮಿಯ ವಿಶೇಷವಾದ ಕ್ಷೇತ್ರಗಳು, ಈ ಮೂರು ಕ್ಷೇತ್ರಗಳನ್ನು ಧನುರ್ ಮಾಸದಲ್ಲಿ ಸೂರ್ಯೋದಯದಿಂದ ಸೂರ್ಯಸ್ತದವರೆಗೆ ಒಂದೇ ದಿನದಲ್ಲಿ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ಪ್ರತಿತಿ ಇರುವುದರಿಂದ ಧನುರ್ ಮಾಸದ ವಿಶೇಷ ಪೂಜೆಗೆ ಕ್ಷೇತ್ರವನ್ನು ಈಗಿನಿಂದಲೇ ಸಜ್ಜು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರಸಿದ್ಧ ಧಾರ್ಮಿಕ ಹಾಗೂ ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿರುವ ಶಿವನಸಮುದ್ರದಲ್ಲಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಇದೆ, ಹಾಗಾಗಿ ಕ್ಷೇತ್ರಕ್ಕೆ ಏನೇನು ಮೂಲಭೂತ ಸೌಲಭ್ಯಗಳು ಬೇಕು ಎಂಬುದರ ಬಗ್ಗೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧ ಪಡಿಸಲಾಗಿದೆ. ನನ್ನ ಅವಧಿಯಲ್ಲಿ ಏನೇನೋ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆ ಅಗತ್ಯ ಕ್ರಮ ವಹಿಸುವುದಾಗಿ ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಕಾಮಗಾರಿ ನಿರ್ವಹಣೆ ಮಾಡಿದ ಗುತ್ತಿಗೆದಾರರು, ಬಣ್ಣದ ಕೆಲಸಗಾರರು, ಗಾರೆ ಕೆಲಸಗಾರರು, ಸೇರಿದಂತೆ ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಎಲ್ಲರನ್ನು ಶಾಸಕ ಎಂ.ಆರ್ ಮಂಜುನಾಥ್ ಸನ್ಮಾನಿಸಿ ಗೌರವಿಸಿದರು.

