ಮೈಸೂರು: ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ಕನ್ನಡಾಂಬೆ
ರಕ್ಷಣ ವೇದಿಕೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ರಾಜಶೇಖರ್ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಈ ಸಂದರ್ಭದಲ್ಲಿ ಕೆಆರ್ಎಸ್ ನಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದು, ಕುಡಿಯುವ ನೀರಿನ ಭದ್ರತೆ ಹಾಗೂ ರೈತರ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲೂ ಪ್ರತಿದಿನ ಸುಮಾರು 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ನೀಡಿರುವ ಆದೇಶವು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಾವೇರಿ ನೀರನ್ನೇ ಅವಲಂಬಿಸಿರುವ ಬೆಂಗಳೂರು ಮಹಾನಗರ, ಮೈಸೂರು, ಮಂಡ್ಯ, ರಾಮನಗರ ಹಾಗೂ ಇತರೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಭದ್ರತೆ ಮೊದಲ ಆದ್ಯತೆಯಾಗಬೇಕು. ರೈತರ ಬೆಳೆ, ಸಾರ್ವಜನಿಕರ ಜೀವನ ಹಾಗೂ ರಾಜ್ಯದ ನೀರಿನ ಭದ್ರತೆಯನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ರಾಜಶೇಖರ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಕಾವೇರಿ ಸಂಬಂಧಿತ ಪ್ರಾಧಿಕಾರಗಳ ಮುಂದೆ ಕರ್ನಾಟಕದ ವಾಸ್ತವ ಪರಿಸ್ಥಿತಿ, ಬರದ ತೀವ್ರತೆ ಹಾಗೂ ಕೆಆರ್ಎಸ್ ಜಲಾಶಯದ ನೈಜ ಸ್ಥಿತಿಯನ್ನು ಸಮರ್ಪಕವಾಗಿ ಮತ್ತು ದೃಢವಾಗಿ ಮಂಡಿಸಬೇಕು. ರಾಜ್ಯದ ಹಕ್ಕು ಹಾಗೂ ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನುಬದ್ಧವಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕನ್ನಡಾಂಬೆ ರಕ್ಷಣ ವೇದಿಕೆ ಒತ್ತಾಯಿಸಿದೆ.
ಮುಂದಿನ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಕರೆ ನೀಡುವ ಕಾನೂನುಬದ್ಧ ಹೋರಾಟಗಳಿಗೆ ಕನ್ನಡಾಂಬೆ ರಕ್ಷಣ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ರಾಜಶೇಖರ್ ಹೇಳಿದ್ದಾರೆ.
ಒಂದು ವೇಳೆ ಕರ್ನಾಟಕದ ಜನರ ಕುಡಿಯುವ ನೀರಿನ ಹಿತಾಸಕ್ತಿ ಹಾಗೂ ರೈತರ ಬದುಕನ್ನು ಕಡೆಗಣಿಸಿ ಇದೇ ರೀತಿಯ ಆದೇಶಗಳು ಮುಂದುವರಿದಲ್ಲಿ, ರಾಜ್ಯವ್ಯಾಪಿ ಕಾನೂನುಬದ್ಧ ರೀತಿಯ ಬೃಹತ್ ಹೋರಾಟವನ್ನು ಸಂಘಟಿಸಲು ಕನ್ನಡಾಂಬೆ ರಕ್ಷಣ ವೇದಿಕೆ ಸಜ್ಜಾಗಿದೆ ಎಂದು ರಾಜಶೇಖರ್ ಎಚ್ಚರಿಕೆ ನೀಡಿದ್ದಾರೆ.
