ಯಳಂದೂರು: ಯಳಂದೂರು ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಡಾ.ಆರ್. ನಂಜುಂಡಯ್ಯ ಅವರಿಗೆ ಗೌರವ ಡಾಕ್ಟರೇಟ್ ದೊರಕಿದ್ದು,ಅವರನ್ನು ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಇತ್ತೀಚೆಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ನಂಜುಂಡಯ್ಯ ಅವರು ನೀಡಿರುವ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ಅಮೆರಿಕನ್ ವಿಸ್ಡಮ್ ಪೀಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರಕಿದೆ,ಹಾಗಾಗಿ ಶಾಲೆಯಲ್ಲಿ ಅವರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಂಜುಂಡಯ್ಯ ಅವರು, ನಾನು ಯಳಂದೂರು ತಾಲೂಕಿನವನೇ ಆಗಿದ್ದು ಇಲ್ಲಿನ ಶಾಲೆಯಲ್ಲಿ ಉಪ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸುತ್ತಿರುವ ವೇಳೆ ನನಗೆ ಪ್ರಶಸ್ತಿ ಸನ್ಮಾನಗಳು ಅರಸಿ ಬರುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.
ಇದು ನಾನು ಮಾಡುವ ಕೆಲಸದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ಶಾಲೆಯಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಶಾಲೆಯಲ್ಲಿ ಹತ್ತು ಹಲವು ಸುಧಾರಣೆಗಳನ್ನು ತರಲು ನಮ್ಮ ಶಿಕ್ಷಕ ಹಾಗೂ ಸಿಬ್ಬಂಧಿ ವರ್ಗದವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
2026-27 ನೇ ಸಾಲಿನ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಈ ಬಾರಿ ನಮ್ಮ ಶಾಲೆಯ ಸುಪರ್ದಿಗೆ ಬಂದಿದ್ದು ಎಲ್ಲಾ ಜವಾಬ್ದಾರಿಯನ್ನು ನಮ್ಮ ಮೇಲಿದೆ, ಇದನ್ನು ಉತ್ತಮವಾಗಿ ಆಯೋಜಿಸುವ ನಿಟ್ಟಿನಲ್ಲಿ ಎಲ್ಲರ ನೆರವನ್ನೂ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸ್ಟೀವನ್ ಮಾತನಾಡಿ, ಆರ್.ನಂಜುಂಡಯ್ಯ ಒಬ್ಬ ಉತ್ತಮ ಶಿಕ್ಷಕರಾಗುವ ಜೊತೆಗೆ ಸಮಾಜಪರ, ಬಡ ಮಕ್ಕಳ ಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದಾರೆ. ಸದಾ ಚಟುವಟಿಕೆಯಿಂದ ಇರುವ ಇವರು ಶಾಲೆಯಲ್ಲಿ ಶಿಕ್ಷಣ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಅನೇಕ ಕ್ರಮ ವಹಿಸುತ್ತಿದ್ದಾರೆ. ತಮ್ಮ ಸಹ ಶಿಕ್ಷಕರ ಜೊತೆಗೆ ಉತ್ತಮ ಸಂಬಂಧ ಸಾಧಿಸಿ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ಅಮೋಘವಾಗಿದೆ. ಇವರ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭ್ಯವಾಗಿರುವುದು, ಈಗ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿರುವುದು ಇದಕ್ಕೆ ಇವರು ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ತ್ರೀವೇಣಿ, ಮಹೇಶ್, ಪುಟ್ಟಸ್ವಾಮಿ, ಹೇಮಂತ್ಕುಮಾರ್, ಆಶಾ, ಮಂಜುಳಾ, ಸುಭಾಷಿಣಿ, ಗೀತಾ, ಮಹೇಶ್ಕುಮಾರ್, ಕೀರ್ತಿ, ಶ್ರೀಧರ್ನಾಯಕ್ ಸೇರಿದಂತೆ ಅನೇಕರು ಹಾಜರಿದ್ದರು.
