ಮೈಸೂರು: ಸಿರಿಗನ್ನಡಂ ಗೆಲ್ಗೆ ಎಂಬ ಘೋಷ ವಾಕ್ಯದ ಕನ್ನಡ ಸೇನಾನಿ ರಾ. ಹ. ದೇಶಪಾಂಡೆ ಅವರ ಹೆಸರನ್ನು ರಾಜ್ಯ ಸರ್ಕಾರ ಚಿರಸ್ಥಾಯಿಯಾಗಿ ಉಳಿಸಲು
ಮುಂದಾಗಲಿ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ರಾ.ಹ.ದೇಶಪಾಂಡೆ ಅವರ ಜನ್ಮದಿನವನ್ನು ಜಾಗೃತಿ ದಿನ ಎಂದು ಘೋಷಣೆ ಮಾಡಬೇಕು ಮತ್ತು ಅವರ ಹೆಸರಿನಲ್ಲಿ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕೊಡಮಾಲು ಕ್ರಮ ಕೈಗೊಳ್ಳಬೇಕು ಮತ್ತು ಬೆಂಗಳೂರಿನಲ್ಲಿ ರಾ. ಹ. ದೇಶಪಾಂಡೆ ಅವರ ಬೃಹತ್ ಕಂಚಿನ ಪ್ರತಿಮೆ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಮಚಂದ್ರ ಹನುಮಂತ ರಾವ್ ದೇಶಪಾಂಡೆ ಅವರು ರಾ. ಹ. ದೇಶಪಾಂಡೆ ಎಂದೇ ಪ್ರಖ್ಯಾತರು. ದೇಶಪಾಂಡೆ ಅವರು ಅವರು ಒಬ್ಬ ಶಿಕ್ಷಣ ತಜ್ಞ, ಇತಿಹಾಸಕಾರು,ಗ್ರಂಥಕರ್ತ ಮತ್ತು ಕನ್ನಡ ಚಳವಳಿಯ ಸಂಘಟಕರಾಗಿದ್ದರು.
ಅವರು ಮಾರ್ಚ್ ೨೦ /೧೮೬೧ ರಲ್ಲಿ ಧಾರಾವಾಡ ಜಿಲ್ಲೆಯ ನರೇಂದ್ರ ತಾಲೂಕಿನಲ್ಲಿ ಜನಿಸಿದರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಕಾಲದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರಾಂತ್ಯಗಳನ್ನ ಒಗ್ಗೂಡಿಸಲು ಮತ್ತು ಕನ್ನಡ ಭಾಷೆ ಉಳಿವಿಗಾಗಿ, ಉತ್ತರ ಕರ್ನಾಟಕದ ಭಾಗದ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮತ್ತು ಕನ್ನಡದ ಬಳಕೆಗೆ ಹೋರಾಡಿದ ದಿಗ್ಗಜರು. ಆ ನಿಟ್ಟಿನಲ್ಲಿ ಕನ್ನಡಿಗರಿಗೆ ಕನ್ನಡದ, ಕನ್ನಡ ನಾಡಿನ ಬಗ್ಗೆ ಜಾಗೃತಿ ಮೂಡಿಸಲು ೨೦/೦೭/೧೮೯೦ ರಂದು ಧಾರಾವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ವನ್ನು ಸ್ಥಾಪಿಸಿದರು. ಈ ಸಂಘವು ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ತೇಜಸ್ವಿ ಸರ್ಕಾರದ ಗಮನ ಸೆಳೆದಿದ್ದಾರೆ.
೧೮೬೧ರಲ್ಲಿ “ವಾಗ್ಭೂಷಣ” ಎಂಬ ಕನ್ನಡದ ಮೊದಲ ಮಾಸ ಪತ್ರಿಕೆಯನ್ನು ಆರಂಭಿಸಿದರು.
ಕನ್ನಡ ನಾಡಿನ ಗತವೈಭವದ ಹಾಗೂ ಕನ್ನಡ ಜಾಗೃತಿ ಲೇಖನಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸೇವೆಗೆ ಟೊಂಕ ಕಟ್ಟಿ ನಿಂತು, ಕನ್ನಡದ ಹಿರಿಮೆಯನ್ನು ಸಾರಿದರು. ೧೮೯೦ ರಲ್ಲಿ ಕನ್ನಡ ಕಾಲೇಜನ್ನು ಸ್ಥಾಪಿಸಿ. ಕನ್ನಡ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯ ಕೈಗೊಂಡರು.
ಸ್ವತಃ ಗ್ರಂಥಕರ್ತರಾದ ಇವರು ೩೦ ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡದ ಸೇವೆಗಾಗಿ ಶಿಕ್ಷಣ ವೃತ್ತಿ ಮಾಡುತ್ತಲೆ ಹಗಲಿರುಳೆನ್ನದೆ ಕನ್ನಡದ ಸೇವೆಗೈದ ರಾ. ಹ. ದೇಶಪಾಂಡೆ ಅವರ ಜನ್ಮ ದಿನ ಇದೇ ತಿಂಗಳ ಮಾರ್ಚ್ ೨೦ ರಂದು.
ಹಾಗಾಗಿ ಸಿರಿಗನ್ನಡಂ ಗೆಲ್ಗೆ ಎಂಬ ಘೋಷ ವಾಕ್ಯವನ್ನು ಕನ್ನಡ ನಾಡಿಗೆ, ಕನ್ನಡಿಗರಿಗೆ ಬಳುವಳಿಯಾಗಿ ನೀಡಿದ ಮೇರು ವ್ಯಕ್ತಿತ್ವದ ರಾ. ಹ. ದೇಶಪಾಂಡೆ ಅವರ ಜನ್ಮ ದಿನವನ್ನು ಸಿರಿಗನ್ನಡಂ ಗೆಲ್ಗೆ ಎಂಬ ಜಾಗೃತಿ ದಿನವಾಗಿ ಆಚರಿಸಬೇಕು ಹಾಗೂ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಅತ್ಯುನ್ನತ ಪ್ರಶಸ್ತಿ ನೀಡಬೇಕು, ಬೆಂಗಳೂರಿನಲ್ಲಿ ಅವರ ಬೃಹತ್ ಪ್ರತಿಮೆ ಸ್ಥಾಪಿಸುವಂತೆ ಸರ್ಕಾರಕ್ಕೆ ಕೋರಿದ್ದಾರೆ.
ಕನ್ನಡದ ಅಸ್ಮಿತೆಗಾಗಿ ದುಡಿದ ಈ ಹಿರಿಯ ಚೇತನ ರಾ. ಹ. ದೇಶಪಾಂಡೆ ಅವರನ್ನು ಪ್ರತಿಯೊಬ್ಬ ಕನ್ನಡಿಗರು ನೆನೆಯುವ ದಿನವಾಗಲಿ ಮುಂದಿನ ಪೀಳಿಗೆಗೂ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದು ಕನ್ನಡ ಕ್ರಾಂತಿದಳ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಆಶಿಸಿದ್ದಾರೆ
