ಕುಶಾಲನಗರ: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಆ.13 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲವಿಲ್ಲ ಎಂದು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ತಿಳದ್ದಾರೆ.
ಕುಶಾಲನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿ ಮಳೆ ಕೊರತೆ ನಡುವೆ ತಮಿಳುನಾಡಿಗೆ ನೀರು ಹರಿಸಬೇಕೆಂಬ ಜಲ ನಿಯಂತ್ರಣ ಮಂಡಳಿ ಆದೇಶ ಖಂಡಿಸಿ ನಾವು ಪ್ರತಿಭಟನೆ ನಡೆಸಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಣೆಕಟ್ಟುಗಳು ಭರ್ತಿಯಾಗಿವೆ. 30 ಸಾವಿರ ಕ್ಯೂಸೆಕ್ ನೀರು ಈಗಾಗಲೆ ತಮಿಳುನಾಡು ತಲುಪಿರುವ ಕಾರಣ ಬಂದ್ ಅವಶ್ಯಕತೆ ಇಲ್ಲ ಎಂಬುದು ರಾಜ್ಯಾಧ್ಯಕ್ಷರ ನಿಲುವು ಎಂದು ಹೇಳಿದರು.
ರಾಜ್ತಾಧ್ಯಕ್ಷರ ಸೂಚನೆ ಮೇರೆಗೆ ಕೊಡಗಿನಲ್ಲಿ ನಾವು ಬಂದ್ ಗೆ ಬೆಂಬಲ ನೀಡುತ್ತಿಲ್ಲ. ಬಂದ್ ನಿಂದ ಉಂಟಾಗುವ ಅನಾನುಕೂಲಗಳನ್ನು ಮನಗಂಡು ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತಿಲ್ಲ ಎಂದು ತಿಳಿಸಿದರು.
ರಾಜ್ಯದ ನೆಲ, ಜಲ, ಭಾಷೆಗೆ ಅನ್ಯಾಯವಾದಾಗ ಹೋರಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಸಂಚಾಲಕ ಎಂ.ಎಸ್.ಮಣಿಕಂಠ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್ ಕಾವಲ್ ಕೊಂಡ, ಕುಶಾಲನಗರ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಸುಂದರ್ ಪಿ.ಎಸ್, ನಗರ ಸಂಚಾಲಕ ರಾಜೇಗೌಡ ಮತ್ತಿತರರು ಹಾಜರಿದ್ದರು.
