ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಲ್ಲಿ ಸೈಟ್ ಹಂಚಿಕೆಗೆ ಇರುವ 15 ವರ್ಷದ ಡೊಮಿಸೈಲ್ ಮಾನದಂಡವನ್ನು ತಕ್ಷಣ ಕನಿಷ್ಠ 25 ವರ್ಷಗಳಿಗೆ ವಿಸ್ತರಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಆಗ್ರಹಿಸಿದರು.
ಗೋಷ್ಠಿಯಲ್ಲಿಂದು ಮಾತನಾಡಿದ
ಅವರು,1984ರ ಕಾಲಘಟ್ಟದಲ್ಲಿ ರೂಪುಗೊಂಡ ಮಾನದಂಡವನ್ನು ಇಂದಿಗೂ ಮುಂದುವರಿಸುತ್ತಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಟೀಕಿಸಿದರು.
ಮೂರು ದಶಕಗಳಲ್ಲಿ ಬೆಂಗಳೂರು ಸಂಪೂರ್ಣವಾಗಿ ಬದಲಾಗಿದೆ. ಆದರೆ ಸರ್ಕಾರದ ನಿಯಮಗಳು ಮಾತ್ರ ಬದಲಾಗಿಲ್ಲ. ಇದರ ನೇರ ಹೊಡೆತ ತಲೆತಲಾಂತರಗಳಿಂದ ಕರ್ನಾಟಕದಲ್ಲಿ ಬದುಕುತ್ತಿರುವ ಕನ್ನಡಿಗರ ಮೇಲೆ ಆಗುತ್ತಿದೆ ಎಂದು ಅವರು ಕಿಡಿಕಾರಿದರು.
ಬೆಂಗಳೂರು ಅಭಿವೃದ್ಧಿಯ ಹೆಸರಿನಲ್ಲಿ ಕನ್ನಡಿಗ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು, ಅದೇ ಭೂಮಿಯನ್ನು ಸೈಟುಗಳಾಗಿ ಪರಿವರ್ತಿಸಿ, ಕನ್ನಡಿಗನೇ ಖರೀದಿಸಲಾಗದಷ್ಟು ದುಬಾರಿ ಬೆಲೆ ನಿಗದಿಪಡಿಸುವುದು ಯಾವ ರೀತಿಯ ಅಭಿವೃದ್ಧಿ ಎಂದು ಡಾ. ಸತೀಶ್ ಪ್ರಶ್ನಿಸಿದರು.
ಬಿಡಿಎ ಸಾರ್ವಜನಿಕ ವಸತಿ ಒದಗಿಸುವ ಸಂಸ್ಥೆಯೇ ಹೊರತು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಲ್ಲ. ಆದರೆ ಇಂದು ಬಿಡಿಎ ಸೈಟ್ಗಳ ಬೆಲೆ ಸಾಮಾನ್ಯ ಕನ್ನಡಿಗನ ಕೈಗೆಟುಕದ ಮಟ್ಟಕ್ಕೆ ಹೋಗಿದೆ. ಒಂದು ಕಡೆ ಕನ್ನಡಿಗ ಜಮೀನು ಕಳೆದುಕೊಳ್ಳುತ್ತಾನೆ. ಮತ್ತೊಂದು ಕಡೆ ಅದೇ ಜಮೀನಿನ ಸೈಟ್ ಖರೀದಿಸಲು ಕನ್ನಡಿಗನೇ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರದ ನೀತಿಯ ವೈಫಲ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
15 ವರ್ಷದ ಹಳೆಯ ಮಾನದಂಡ ಮುಂದುವರಿದರೆ ಸ್ಥಳೀಯ ಕನ್ನಡಿಗರಿಗೆ ಸಿಗಬೇಕಾದ ಅವಕಾಶಗಳು ಮತ್ತಷ್ಟು ಕುಂಠಿತವಾಗಲಿವೆ. ಕನ್ನಡಿಗನು ತನ್ನದೇ ನೆಲದಲ್ಲಿ ಸೈಟಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಸರ್ಕಾರ ದಾರಿ ಮಾಡಿಕೊಡಬಾರದು ಎಂದು ಅವರು ಎಚ್ಚರಿಸಿದರು.
ಸರ್ಕಾರ ತಕ್ಷಣ ನಿಯಮ ತಿದ್ದುಪಡಿ ಮಾಡಬೇಕು, ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸ್ಥಳೀಯರಿಗೆ ನ್ಯಾಯಯುತ ಆದ್ಯತೆ ನೀಡಬೇಕು, ಸಾಮಾನ್ಯ ಕನ್ನಡಿಗರಿಗೆ ಕೈಗೆಟುಕುವ ಸೈಟ್ ಬೆಲೆ ಹಾಗೂ ಸಂಪೂರ್ಣ ಪಾರದರ್ಶಕ ಹಂಚಿಕೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಡಾ. ಸತೀಶ್ ಕುಮಾರ್ ಆಗ್ರಹಿಸಿದರು.
ಇದು ಕೇವಲ ಆಮ್ ಆದ್ಮಿ ಪಕ್ಷದ ರಾಜಕೀಯ ವಿಚಾರವಲ್ಲ; ಕನ್ನಡಿಗರ ಬದುಕು, ಭೂಮಿ ಮತ್ತು ಭವಿಷ್ಯದ ಪ್ರಶ್ನೆ. ನಾಡಿನ ಎಲ್ಲ ಕನ್ನಡಪರ ಸಂಘಟನೆಗಳು, ರೈತರು, ಹೋರಾಟಗಾರರು ಹಾಗೂ ಕನ್ನಡಪರ ನಾಯಕರು ಪಕ್ಷಭೇದ ಮರೆತು ಈ ಬೇಡಿಕೆಗೆ ಧ್ವನಿ ನೀಡಬೇಕು ಅವರು ಮನವಿ ಮಾಡಿದರು.
