ಮೈಸೂರು: ಮೈಸೂರಿನಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ದ ಮೊದಲ ದಿನದ ಸ್ಪರ್ಧೆಗಳಲ್ಲಿ ಕೇರಳದ ಅಂಚೆ ವೃತ್ತ ಮೊದಲ ಸ್ಥಾನವನ್ನು ಪಡೆದಿದೆ.
ಜತೆಗೆ ಹತ್ತು ಪ್ರಥಮ ಬಹುಮಾನಗಳನ್ನು ಹಾಗೂ ಒಂದು ದ್ವಿತೀಯ ಬಹುಮಾನವನ್ನು ಪಡೆದು ಒಟ್ಟು 53 ಅಂಕ ಗಳಿಸಿದೆ.
ದ್ವಿತೀಯ ಸ್ಥಾನದಲ್ಲಿ ಕರ್ನಾಟಕದ ಅಂಚೆ ವೃತ್ತ ಇದ್ದು, ಐದು ಪ್ರಥಮ ಬಹುಮಾನಗಳು ಏಳು ದ್ವಿತೀಯ ಬಹುಮಾನಗಳು, ಒಂದು ತೃತೀಯ ಬಹುಮಾನವನ್ನು ಪಡೆದು ಒಟ್ಟು 47 ಅಂಕಗಳನ್ನು ಗಳಿಸಿದೆ.
ತೃತೀಯ ಸ್ಥಾನವನ್ನು ಒಡಿಶಾ ಅಂಚೆ ವೃತ್ತಪಡೆದಿದೆ. ಎರಡು ಪ್ರಥಮ ಬಹುಮಾನ, ಒಂದು ದ್ವಿತೀಯ ಬಹುಮಾನ, ಒಂದು ತೃತೀಯ ಬಹುಮಾನ ಪಡೆದಿದ್ದು ಒಟ್ಟು 14 ಅಂಕಗಳನ್ನು ಪಡೆದಿದೆ.
ಕೇರಳ ಅಂಚೆ ವೃತ್ತದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಿರಿಯರ ವಿಭಾಗದಲ್ಲಿ ಶ್ರೀಹರಿ, ಹಿರಿಯರ ವಿಭಾಗದಲ್ಲಿ ತೀರ್ಥ ಪ್ರಕಾಶ್, ಹಿರಿಯರ ವಿಭಾಗದ ಕೊಳಲು ವಾದನ ಮತ್ತು ಮೃದಂಗ ವಾದನದಲ್ಲಿ ವಿಷ್ಣು ವಿಜಯ್ ವಿಜೇತರಾಗಿದ್ದಾರೆ.
ಕರ್ನಾಟಕ ಅಂಚೆ ವೃತ್ತದ ಗಿರೀಶ್ ಆರ್ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ಹಿರಿಯರ ವಿಭಾಗಗದಲ್ಲಿ ಪ್ರಥಮ ಸ್ಥಾನ, ಕರ್ನಾಟಕ ಶಾಸ್ತ್ರೀಯ ಶೈಲಿಯ ಲಘು ಸಂಗೀತದ ಕಿರಿಯರ ವಿಭಾಗದಲ್ಲಿ ಚಾರ್ಮಿ ಎಸ್, ಘಟಂ ಮತ್ತು ಮೃದಂಗ ವಾದನದ ಹಿರಿಯರ ವಿಭಾಗದಲ್ಲಿ ಆರ್.ಚಂದ್ರಶೇಖರ್, ಕೊಳಲು ವಾದನದ ಕಿರಿಯರ ವಿಭಾಗದಲ್ಲಿ ಪ್ರಥಮ್ ಕೆ ಆರ್, ವೀಣಾ ವಾದನದ ಹಿರಿಯರ ವಿಭಾಗದಲ್ಲಿ ದೀಕ್ಷಾ.ಜೆ, ಕರ್ನಾಟಕ ಶಾಸ್ತ್ರೀಯ ಸಂಗೀತದ ಕಿರಿಯರ ವಿಭಾಗದಲ್ಲಿ ಅಭಿಜ್ಞ, ವೈಲಿನ್ ವಾದನದ ಹಿರಿಯರ ವಿಭಾಗದಲ್ಲಿ ಪ್ರದ್ಯುಮ್ ಕೌಶಿಕ್. ಸಿ.ಜಿ ಸೇರಿದಂತೆ ಹಲವರು ವಿಜೇತರಾಗಿದ್ದಾರೆ.
ಒಡಿಶಾ ಅಂಚೆ ವೃತ್ತದ ಕುಚುಪುಡಿ ನೃತ್ಯದ ಕಿರಿಯರ ವಿಭಾಗದಲ್ಲಿ ಹೃದ್ಯ ಮಣಿಕರಣಿಕ, ಹಿರಿಯರ ವಿಭಾಗದಲ್ಲಿ ಸಮೀಕ್ಷಾ ಮೋಹಂತಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಿರಿಯರ ವಿಭಾಗದಲ್ಲಿ ಅಭಿಜಿತ್ ಮಹಾಪಾತ್ರ ಸೇರಿದಂತೆ ಹಲವರು ವಿಜೇತರಾದರು.
ಕೇಂದ್ರ ಅಂಚೆ ಇಲಾಖೆ ಮತ್ತು ಕರ್ನಾಟಕ ಅಂಚೆ ವೃತ್ತ ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಸಭೆ ಇಲ್ಲಿನ ಅಂಚೆ ತರಬೇತಿ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ
ನಡೆದಿದ್ದು ಭಾರತದಾದ್ಯಂತ 21 ಅಂಚೆ ವೃತ್ತಗಳನ್ನು ಪ್ರತಿನಿಧಿಸುವ ಒಟ್ಟು 335 ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
