ಮೈಸೂರು: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಾಂಸ್ಕೃತಿಕ ರಾಜಧಾನಿಯ ಜನರಿಗೆ ಮತ್ತೊಂದು ಖುಷಿ ವಿಚಾರವನ್ನು ಸಂಸದ ಯದುವೀರ್ ನೀಡಿದ್ದಾರೆ.
ಮೈಸೂರಿನಿಂದ ಮುತ್ತಿನ ನಗರಿ ಹೈದರಾಬಾದ್ಗೆ ಮತ್ತೊಂದು ವಿಮಾನ ಸಂಚಾರ ಅತಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೈಸೂರಿನಿಂದ ಹೈದರಾಬಾದ್ಗೆ ಮೇ 1ರಿಂದ ಇನ್ನೊಂದು ವಿಮಾನ ಸೇವೆ ಆರಂಭವಾಗಲಿದೆ. ಮಧ್ಯಾಹ್ನ ೨.೨೦ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನ ಮಧ್ಯಾಹ್ನ ನಾಲ್ಕು ಗಂಟೆಗೆ ಹೈದರಾಬಾದ್ ತಲುಪಲಿದೆ.
ಈಗಾಗಲೇ ಎರಡು ವಿಮಾನ ಚೆನ್ನೈ, ಹೈದರಾಬಾದ್ಗೆ ಸಂಚರಿಸುತ್ತಿದ್ದು, ಈಗ ಇನ್ನೊಂದು ವಿಮಾನ ಸಂಚಾರದಿಂದ ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಮುಂದಿನ ದಿನಗಳಲ್ಲಿ ಮೈಸೂರಿನಿಂದ ಹೆಚ್ಚುವರಿ ವಿಮಾನ ಸಂಚಾರ ಕೂಡಾ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಮೈಸೂರಿನಿಂದ ವಾಯು ಸಂಚಾರ ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಬಾರಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ವಿಸ್ತರಣೆಗೆ ತೊಡಕಾಗಿರುವ ಭೂ ಸ್ವಾಧೀನ ಪ್ರಕ್ರಿಯೆ ಕೂಡ ಬಹುತೇಕ ಪೂರ್ಣಗೊಂಡಿದೆ,ಭೂಮಿ ಹಸ್ತಾಂತರಗೊಂಡ ನಂತರ ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ ವಿಮಾನ ನಿಲ್ದಾಣ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದ್ದಾರೆ.
ವಿಮಾನ ನಿಲ್ದಾಣ ವಿಸ್ತರಣೆಗೊಂಡ ನಂತರ ದೇಶದ ಪ್ರಮುಖ ನಗರಗಳಿಗೆ ಮೈಸೂರಿನಿಂದ ನೇರ ವಿಮಾನ ಸಂಚಾರ ಸೇವೆ ಆರಂಭಗೊಳ್ಳಲಿದೆ. ಇದರೊಂದಿಗೆ ಮೈಸೂರಿನ ಅಭಿವೃದ್ಧಿಯೂ ಸಮಾನಾಂತರವಾಗಿ ಆಗಲಿದೆ ಎಂದು ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಿಂದ ಏರ್ ಟ್ರಾಫಿಕ್ ಹೆಚ್ಚಿಸಲು ಎಲ್ಲ ರೀತಿಯ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಸಂಪೂರ್ಣ ಕಾರ್ಯ ಪ್ರವೃತ್ತನಾಗಲಿದ್ದೇನೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದ್ದಾರೆ.
