ಬೆಂಗಳೂರು: ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯ, ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ನನಗೆ ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಇದು ಮುಂದುವರಿದ ಅಧಿವೇಶನವೋ, ವಿಶೇಷ ಅಧಿವೇಶನವೋ ಸ್ಪಷ್ಟನೆ ನೀಡಿ ಎಂದು ಪಟ್ಟುಹಿಡಿದ ವೇಳೆ
ಡಿ.ಕೆ ಶಿವಕುಮಾರ್ ಮಾತನಾಡಿದರು.
ಈ ಹಿಂದೆ ಸರ್ಕಾರಗಳಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರು ತಮಗೆ ತಿಳಿದಂತೆ ಕೆಲಸ ಮಾಡಿರಬಹುದು. ಕೆಲವನ್ನು ವಜಾ ಮಾಡಿರಬಹುದು. ಈಗ ನಾವೆಲ್ಲ ರಾಜಕಾರಣವನ್ನು ಬದಿಗಿಟ್ಟು ರಾಜ್ಯದ ಹಿತಕಾಪಾಡುವ ಕೆಲಸ ಮಾಡಬೇಕಿದೆ. ಹಾಗಾಗಿ ನಿಮ್ಮಿಂದ ಅಮೂಲ್ಯ ಸಲಹೆಗಳನ್ನು ಸ್ವೀಕಾರ ಮಾಡುವ ಉದ್ದೇಶದಿಂದ ಈ ವಿಶೇಷ ಅಧಿವೇಶನ ಕರೆದಿದ್ದೇವೆ ಎಂದು ತಿಳಿಸಿದರು.
‘ಸಮಯ ಹಾಗೂ ತಿಳುವಳಿಕೆ ಎರಡೂ ಒಂದೇ ಬಾರಿಗೆ ಸಿಗುವುದು ಅಪರೂಪ. ಸಿಕ್ಕಿದವರು ನಿಜಕ್ಕೂ ಭಾಗ್ಯವಂತರು. ಏಕೆಂದರೆ, ಸಮಯ ಇದ್ದಾಗ ತಿಳುವಳಿಕೆ ಇರುವುದಿಲ್ಲ. ಕಳೆದ ಅಧಿವೇಶನದಲ್ಲಿ 10 ದಿನ ಸಮಯ ಇತ್ತು. ವಿರೋಧ ಪಕ್ಷಗಳು ಅದನ್ನು ಸರಿಯಾಗಿ ಬಳಸಿಕೊಳ್ಳದೆ ವ್ಯರ್ಥ ಮಾಡಿದವು. ಇಂದು ಕಸ್ತೂರಿ ರಂಗನ್ ವರದಿ ಪರಿಣಾಮ ಹಾಗೂ ನಾಡಿನ ರೈತರ, ಬರದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು 3 ದಿನಗಳ ಅಧಿವೇಶನವನ್ನು ಕರೆದಿದ್ದೇವೆ’ ಎಂದು ವಿವರಿಸಿದರು.
‘ನಾವು ನಿಂತಿರುವ ಈ ಭೂಮಿ ನಾವೆಲ್ಲಾ ನಮ್ಮದೇ ಅಂದುಕೊಂಡಿದ್ದೇವೆ. ನಾವು ಸತ್ತಾಗ ಈ ಭೂಮಿಗೇ ಸೇರುತ್ತೇವೆ. ಸುಡುವಾಗ ಭೂಮಿಯ ಸೌದೆಯಿಂದಲೇ ಸುಟ್ಟು ಅದನ್ನೂ ಭೂಮಿಗೇ ಬಿಡುತ್ತಾರೆ. ಹಾಗಾಗಿ ಈ ಭೂಮಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಸಿಎಂ ಹೇಳಿದರು.
ಕಸ್ತೂರಿ ರಂಗನ್ ವರದಿಯೇ ಈಗ ಸಮಸ್ಯೆಯಾಗಿರುವಾಗ ಇದರ ಪರಿಹಾರಕ್ಕೆ ಅನೇಕ ಸಲಹೆಗಳು ಬಂದಿವೆ. ಎಲ್ಲವನ್ನೂ ಗಮನಿಸಿ, ಚರ್ಚಿಸಿ ಏನಾದರು ಮಾಡಿ ಪಶ್ಚಿಮಘಟ್ಟದ ಬಡವರಿಗೆ, ರೈತರಿಗೆ, ಒಟ್ಟಾರೆ ಇಡೀ ಕರ್ನಾಟದ ಜನತೆಗೆ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಈ ಅಧಿವೇಶನದಲ್ಲಿ ನಾವೆಲ್ಲಾ ಸೇರಿದ್ದೇವೆ ಎಂದು ಹೇಳಿದರು.
‘ಕಸ್ತೂರಿ ರಂಗನ್ ವರದಿಯ ಉಲ್ಲೇಖದಂತೆ, ರಾಜ್ಯದ ಪಶ್ಚಿಮಘಟ್ಟದ 19,252 ಚ.ಕಿಮೀ ಸೂಕ್ಷ್ಮಪ್ರದೇಶವಾಗಿದೆ. 961ಕಿ.ಮೀ ಹೆಚ್ಚವರಿಯಾಗಿ ಸೇರ್ಪಡೆಗೊಳಿಸಲಾಗಿದೆ. 3,138 ಎಕರೆ ಖಾಸಗಿ ರೈತರು ಜಮೀನು ಸೇರಿದೆ. ಬೇರೆ ಬೇರೆ ರಾಜ್ಯಗಳು ಮುಖ್ಯವಾಗಿ ಕೇರಳದವರು ಈ ವಿಚಾರವಾಗಿ ತಮ್ಮದೇ ಆದ ಲೆಕ್ಕಾಚಾರ ಮಾಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.
‘ನಾನು ಪಶ್ಚಿಘಟ್ಟದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು, ರೈತರನ್ನು, ಜನ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಹಲವರು ಹಲವು ರೀತಿ ಸಲಹೆಗಳನ್ನು ನೀಡಿದ್ದಾರೆ. ರೈತರು ವರದಿಯನ್ನೇ ತಿರಸ್ಕಾರ ಮಾಡಿ, ಅಧ್ಯಯನಕ್ಕೆ ಸಮಿತಿ ರಚಿಸಿ. ಕೇರಳ ಮಾದರಿ ಅನುಸರಿಸಿ, ಪರಿಸರ ಸೂಕ್ಷ್ಮವಲಯ ಎನ್ನುವುದನ್ನೇ ತೆಗೆದುಹಾಕಿ ಎಂದು ಹೇಳಿದ್ದಾರೆ.
‘ಕೋಟ ಶ್ರೀನಿವಾಸ ಪೂಜಾರಿ ಅವರು ತಾಂತ್ರಿಕ ಸಮಿತಿಯನ್ನು ರಚಿಸಿ ಎಂದರೆ, ಶಾಸಕ ಆರಗ ಜ್ಞಾನೇಂದ್ರ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಅರಣ್ಯಗಳ ಕುರಿತ ಕಾಯ್ದೆಗಳು ಕೇಂದ್ರದ ಸುಪರ್ದಿಯಲ್ಲಿವೆ. ಅವುಗಳನ್ನು ರಾಜ್ಯದ ವ್ಯಾಪ್ತಿಗೆ ಬಿಟ್ಟುಕೊಡುವಂತೆ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಎಂದು ವಿವರಿಸಿದರು.
‘2021ರಲ್ಲಿ ಆರಂಭವಾಗಿರುವ ಗಡಿಗುರುತಿಸುವ ಸಂಜೀವ್ ಕುಮಾರ್ ವರದಿ ಇನ್ನು ನನ್ನ ಕೈ ಸೇರಿಲ್ಲ. ಬಗರ್ ಹುಕಂ ಸಂಬಂಧಿಸಿದಂತೆ ಫಾರಮ್ ನಂಬರ್ 50, 51, 94ಸಿ ಕೆಲಸಗಳು ಆಗುತ್ತಿಲ್ಲ. ಶಾಸಕರು ಬಗರ್ ಹುಕುಂ ಸಮಿತಿಯ ಸಭೆಯನ್ನು ನಿಯಮಿತವಾಗಿ ಕರೆಯುತ್ತಿಲ್ಲ. ಅರ್ಜಿಗಳು ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಅಕ್ರಮ-ಸಕ್ರಮಕ್ಕೂ ತೊಂದರೆ ಆಗುತ್ತಿದೆ’ ಎಂದು ಹೇಳಿದರು.
‘ಇದರ ಜೊತೆಗೆ ಸರ್ವ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ, ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಸಲಹೆಯೂ ಬಂದಿದೆ. ಕೆಲವರು ಆರ್ಟಿಕಲ್ 371 ಸೇರಿಸಿ ವಿಶೇಷ ಸ್ಥಾನಮಾನ ನೀಡಿ ಎಂದು ಗಮನ ಸೆಳೆದಿದ್ದಾರೆ ಎಂದು ವಿವರಿಸಿದರು.
ಈ ವಿಶೇಷ ಅಧಿವೇಶನ ನಡೆಸಲು ವಿರೋಧ ಪಕ್ಷಗಳು ಮನವಿ ಮಾಡಿಲ್ಲ, ನಮ್ಮ ಮೇಲೆ ನಂಬಿಕೆ ಇಟ್ಟು ಅಧಿಕಾರಕ್ಕೆ ತಂದಿರುವ ರಾಜ್ಯದ ಜನರ ಭಾವನೆ ಅರಿಯಲು ಅಧಿವೇಶನ ಕರೆಯಲಾಗಿದೆ. ಅವರು ವಿರೋಧ ಪಕ್ಷದವರು ನಿಲುವಳಿ ಸೂಚನೆ ನೀಡಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಾನು ಸುಮ್ಮನೆ ಇಲ್ಲಿಗೆ ಬಂದು ಕೂತಿಲ್ಲ. ರಾಜ್ಯದ ನಾಲ್ಕು ವಲಯಗಳಿಗೆ ಹೋಗಿ ಅಲ್ಲಿ ಸಭೆಗಳನ್ನು ಮಾಡಿದ್ದು, ಅಲ್ಲಿಗೆ ಖುದ್ದಾಗಿ ಹೋಗಿ ಪರಿಸ್ಥಿತಿ ಅವಲೋಕಿಸಿದ್ದೇನೆ. ನಮ್ಮ ಸರ್ಕಾರ ಜನರಿಗೆ ಯಾವ ರೀತಿ ಸಹಾಯ ಮಾಡಬೇಕು ಎಂದು ಅನೇಕ ತೀರ್ಮಾನ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
