ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಲೇಖಕಿ ಸಿ.ಎನ್.ಮುಕ್ತಾ ಅವರು ಶುಕ್ರವಾರ ವಿಧಿವಶರಾಗಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು,
ಅವರಿಗೆ 75 ವರ್ಷ ವಯಸ್ಸಾಗಿತ್ತು.
ಕಳ್ಳಂಬೆಳ್ಳ ನರಸಿಂಹ ಮೂರ್ತಿ ಮುಕ್ತಾ ಅವರು ಅವಿವಾಹಿತರಾಗಿದ್ದರು. ಅವರಿಗೆ ಸೋದರ, ಸೋದರಿ ಇದ್ದಾರೆ. ಲೇಖಕರಾಗಿದ್ದ ನವರತ್ನರಾಮ್ ರಾವ್ ಅವರು ಇವರ ಚಿಕ್ಕಪ್ಪ.
ಮುಕ್ತಾ ಅವರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ 25 ವರ್ಷಕ್ಕೂ ಅಧಿಕ ಕಾಲ ವಿವಿಧೆಡೆ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು.
ಅವರ ಸುಖದ ಸೋಪಾನ, ಕ್ಷಮಯಾ ಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಅಮೃತಮಯಿ, ವಿಮುಕ್ತಿ ಕಾದಂಬರಿಗಳು ಪ್ರಸಿದ್ಧವಾಗಿವೆ. ಅವರ ಕಾದಂಬರಿಗಳು ರಾಜ್ಯದ ಪ್ರಮುಖ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.
ಅಲ್ಲದೆ 75ಕ್ಕೂ ಅಧಿಕ ಕಾದಂಬರಿ, 15ಕ್ಕೂ ಅಧಿಕ ಕಥಾಸಂಕಲನಗಳು ಪ್ರಕಟವಾಗಿವೆ. ಅವರ ವಿಮುಕ್ತಿ ಕಾದಂಬರಿ ಆಧರಿಸಿ ರಾಜೇಂದ್ರಸಿಂಗ್ ಬಾಬು ಅವರು ದೋಣಿ ಸಾಗಲಿ ಸಿನಿಮಾ ನಿರ್ದೇಶಿಸಿದ್ದರು. ಮೇಘ ಮಂದಾರ ಕಾದಂಬರಿ ಆಧರಿಸಿ ಕೋಡ್ಲು ರಾಮಕೃಷ್ಣ ಅವರು ಮಿಸ್ ಕ್ಯಾಲಿಫೋರ್ನಿಯಾ ಸಿನಿಮಾ ನಿರ್ದೇಶಿಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಮುಕ್ತಾ ಅವರು ಭಾಜನರಾಗಿದ್ದರು.
ಅವರ ಅಂತಿಮ ದರ್ಶನಕ್ಕೆ ಲಕ್ಷ್ಮಿಪುರಂನ ಆರ್.ಟಿ.ಒ ವೃತ್ತದ ಬಳಿಯ ಡಬಲ್ ಟ್ಯಾಂಕ್ ರಸ್ತೆ ಬದಿಯ ಅವರ ಮನೆಯಲ್ಲಿ ಏರ್ಪಡಿಸಲಾಗಿತ್ತು.
