ನಾಪೋಕ್ಲು: ಕೊಡಗು ಜಿಲ್ಲೆಯ ನಾಪೋಕ್ಲು ಭಾಗದ ಪಾಲೂರು ಮತ್ತಿತರ ಗ್ರಾಮಗಳಲ್ಲಿ ಆರೋಗ್ಯವಂತ ಹಸುಗಳು ವಿಚಿತ್ರ ರೋಗದಿಂದ ಬಳಲುತ್ತಿದ್ದು
ಜನತೆ ಆತಂಕಗೊಂಡಿದ್ದಾರೆ.
ಹಸುಗಳ ಕಾಲುಗಳು ನಿಧಾನವಾಗಿ ಕೃಶಗೊಂಡು ದುರ್ಬಲಗೊಳ್ಳುತ್ತಾ ನಂತರ ಮೃತಪಡುತ್ತವೆ.
ಈ ವಿಚಿತ್ರ ಮಾರಕ ರೋಗದಿಂದಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಪಾಲೂರು ಗ್ರಾಮದ ರೈತ ಸೂದನ ಎಸ್.ಈರಪ್ಪ ಅವರು ಮಾತನಾಡಿ, ಆರೋಗ್ಯವಂತ ಹಸುಗಳ ಕಾಲುಗಳು ದಿನೇದಿನ ಕೃಶವಾಗುತ್ತಾ ಬರುತ್ತೆ,ತದನಂತರ ರಾಸುಗಳು ಸಾವಿಗೀಡಾಗುತ್ತಿವೆ. ಈ ರೋಗದ ಬಗ್ಗೆ ನಮ್ಮ ರೈತರು ಬಹಳ ಕಂಗಾಲಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪಾಲೂರು ಹಾಗೂ ಸಮೀಪದ ಹಳ್ಳಿಗಳಲ್ಲಿ ಹೈನುಗಾರಿಕೆಯನ್ನು ಪ್ರಮುಖ ಉದ್ಯಮವನ್ನಾಗಿ ಮಾಡಿಕೊಂಡಿರುವ ರೈತರು ಈ ರೋಗಕ್ಕೆ ಪರಿಹಾರ ಕಾಣದೆ ತೊಂದರೆಗೆ ಒಳಗಾಗಿದ್ದಾರೆ.
ಪಶು ವೈದ್ಯಕೀಯ ಇಲಾಖೆಯವರು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ರೋಗದ ಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ರೈತರು ಹೆಚ್ಚು ಆತಂಕ ಪಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರೋಗದ ಬಗ್ಗೆ ತಜ್ಞ ವೈದ್ಯರನ್ನು ಕರೆಸಿ,ಪರಿಶೀಲಿಸಿ ಚಿಕಿತ್ಸೆ ಕೊಡಿಸಬೇಕು ರೈತರಿಗೆ ಸೂಕ್ತ ನೆರವು ನೀಡಬೇಕೆಂದು ಈರಪ್ಪ ಅವರು ಕೋರಿದ್ದಾರೆ
