ನಂಜನಗೂಡು: ನಂಜನಗೂಡಿನಲ್ಲಿ ನಿನ್ನೆ ರಾತ್ರಿ ನಡೆದ ಅಂಧಕಾಸುರ ವಧೆ ಕಾರ್ಯಕ್ರಮದಲ್ಲಿ ಅರ್ಚಕರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ್ದು ಶ್ರೀಕಂಠೇಶ್ವರ ದೇವಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ.
ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಅರ್ಚಕ ಉಪಾಧ್ಯಾಯ(55)ಮೃತಪಟ್ಟಿದ್ದಾರೆ
ನಿನ್ನೆ ರಾತ್ರಿ ದೇವಾಲಯದ ಮುಂದೆ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು.ನೆಲದ ಮೇಲೆ ರಂಗೋಲಿಯಲ್ಲಿ ಬಿಡಿಸಲಾಗಿದ್ದ ಅಂಧಕಾಸುರನ ಭಾವಚಿತ್ರದ ಮೇಲೆ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನ ಹೊತ್ತ ಅರ್ಚಕರ ತಂಡ ಎಂದಿನ ಆಚರಣೆಯಂತೆ ಹೊತ್ತುತಂದರು.
ಮಂತ್ರಘೋಷಗಳು ಮುಗಿಲು ಮುಟ್ಟಿತ್ತು.ಭಾವಚಿತ್ರದ ಮೇಲೆ ಪಲ್ಲಕ್ಕಿ ಬರುತ್ತಿದ್ದಂತೆ ಸ್ವಲ್ಪ ದೂರದಲ್ಲಿ ನಿಂತಿದ್ದ ಅರ್ಚಕ ಉಪಾಧ್ಯಾಯ ಅವರು ಪಲ್ಲಕ್ಕಿಯನ್ನ ತಮ್ಮ ಭುಜದ ಮೇಲೆ ಹೊರಲು ಮುಂದೆ ಬಂದು ಭುಜ ಕೊಟ್ಟ ಕೆಲವೇ ಸೆಕೆಂಡ್ ಗಳಲ್ಲಿ ಕುಸಿದು ಬಿದ್ದರು.
ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯ ಅವರ ನೆರವಿಗೆ ಧಾವಿಸಿದರು.ಕೂಡಲೇ ಶುಶ್ರೂಷೆ ನೀಡಿ ಆಸ್ಪತ್ರೆಗೆ ಸಾಗಿಸಿದರಾದರೂ ಮೃತಪಟ್ಟಿದ್ದರು.
