ಮೈಸೂರು: ಸಾರ್ವಜನಿಕರು ಸಮಸ್ಯೆಗಳನ್ನು ತಮ್ಮ ಬಳಿಗೆ ತಂದಾಗ ಅವುಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚಿಸಿದರು.
ಪ್ರಮುಖವಾಗಿ ಗ್ರಾಮೀಣ ಭಾಗದ ಜನರನ್ನು ಪದೇಪದೆ ಕಚೇರಿಗಳಿಗೆ ಅಲೆಸುವ ಕೆಲಸ ಮಾಡಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದರು.
ಮೈಸೂರಿನ ಬಸ್ ನಿಲ್ದಾಣ ಸಮೀಪದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.
ತಾಲೂಕು ಕಚೇರಿಯಲ್ಲಿನ ಕೆಲವು ಲೋಪದೋಷಗಳ ಕುರಿತು ಜನರು ಅಹವಾಲುಗಳನ್ನು ನನ್ನ ಕಚೇರಿಗೆ ಕಳುಹಿಸಿದ್ದರು. ಈ ನಿಟ್ಟಿನಲ್ಲಿ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು ಎಂದು ಹೇಳಿದರು.
ತಾಲೂಕು ಕಚೇರಿಗಳಿಗೆ ಬರುವ ಹೆಚ್ಚಿನ ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ಇವರ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲ ಅಧಿಕಾರಿಗಳು ಮುಂದಾಗಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಯದುವೀರ್ ಎಚ್ಚರಿಸಿದರು.
ಕಚೇರಿಗೆ ತಡವಾಗಿ ಬಂದ ಸಿಬ್ಬಂದಿಯನ್ನು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ನಂತರ ತಹಶೀಲ್ದಾರ್ ಮಹೇಶ್ ಕುಮಾರ್ ಅವರೊಂದಿಗೆ ಇಡೀ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು.
ಕಚೇರಿಗೆ ಸಿಬ್ಬಂದಿ ತಡವಾಗಿ ಬರುವ ಹಾಗೂ ಕಚೇರಿಯಲ್ಲಿ ಇಲ್ಲದಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಸಮಸ್ಯೆ ಬಗೆಹರಿಸಲು ತಹಶೀಲ್ದಾರ್ಗೆ ಸೂಚನೆ ನೀಡಿರುವುದಾಗಿ ಸಂಸದರು ತಿಳಿಸಿದರು.
ಕಚೇರಿಯಲ್ಲಿರುವ ಲಿಫ್ಟ್ ಕೆಟ್ಟು ನಿಂತಿತ್ತು, ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂದು ಅದನ್ನೀಗ ರಿಪೇರಿ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಜನರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಜವಾಬ್ದಾರಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಯದುವೀರ್ ತಿಳಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬವಾಗುತ್ತಿರುವುದರಿಂದ ಭಾರಿ ತೊಂದರೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಯದುವೀರ್ ಆಗ್ರಹಿಸಿದರು.
