ಮೈಸೂರು: ಮೈಸೂರು ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲಿತಾಂಶ ಉತ್ತಮೀಕರಣಕ್ಕೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಬಿಇಒ ಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖಡಕ್ ಸೂಚನೆ ನೀಡಿದರು.
ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಡಿ.ದೇವರಾಜು ಅರಸು ಸಭಾಂಗಣದಲ್ಲಿ ಮೈಸೂರು ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶ ವಿಶ್ಲೇಷಣಾ ಸಭೆಯಲ್ಲಿ ಈ ಸೂಚನೆ ನೀಡಿದರು.
ಮೊದಲ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಶೇ. 50 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಹುಣಸೂರು, ಪಿರಿಯಾಪಟ್ಟಣ , ಹೆಚ್.ಡಿ ಕೋಟೆ, ನಂಜನಗೂಡು, ಮೈಸೂರು ದಕ್ಷಿಣ ತಾಲೂಕಿನ ಕೆಲವು ಶಾಲೆಗಳಿಗೆ ನೊಟೀಸ್ ನೀಡಿ, ನಿರಂತರವಾಗಿ ತಾಲೂಕಿನಲ್ಲೇ ತಂಡಗಳನ್ನು ರಚಿಸಿ ಆ ಶಾಲೆಗಳ ಫಲಿತಾಂಶ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದರು.
ಮೊದಲ ಮೂರು ಸ್ಥಾನದಲ್ಲಿ ಜಿಲ್ಲೆಯ ಫಲಿತಾಂಶ ಇರುವಂತೆ ನೋಡಿಕೊಳ್ಳಲು ಎಲ್ಲರೂ ಶ್ರಮಿಸಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚನೆ ನೀಡಿದರು.
ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಲ್ಲಿ ಫಲಿತಾಂಶ ವಿಶ್ಲೇಷಿಸಿ, ವಿಷಯವಾರು ಹಿಮ್ಮಾಹಿತಿ ನೀಡುವಂತೆ ತಿಳಿಸಲಾಯಿತು. ಡಿಡಿಪಿಯು ಉಪನಿರ್ದೇಶಕರಿಂದ ಪಿಯುಸಿ ಫಲಿತಾಂಶ ವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಲಾಯಿತು.
ಸಭೆಯಲ್ಲಿ ಉಪನಿರ್ದೇಶಕರು (ಆಡಳಿತ), ಡಯಟ್ ಪ್ರಾಂಶುಪಾಲರು ಮತ್ತು ಬಿಇಒ, ಹಿರಿಯ ಉಪನ್ಯಾಸಕರು, ಪಿಯು ಕಾಲೇಜಿನ ನೋಡಲ್ ಪ್ರಾಂಶುಪಾಲರು, ಬಿ.ಆರ್.ಸಿ, ಸಹಾಯಕ ನಿರ್ದೇಶಕರು, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರು, ಅಧಿಕಾರಿಗಳು ಭಾಗವಹಿಸಿದ್ದರು.
