ಮೈಸೂರು: ಪಿಎಚ್ಡಿ ಪ್ರವೇಶ ಪಡೆದ ಸಂಶೋಧಕರಿಗೆ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮೈಸೂರು ವಿವಿ ಸಂಶೋಧಕರು ಕ್ರಾಫರ್ಡ್ ಹಾಲ್ ಎದುರು ಸೋಮವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
2026-27ನೇ ಸಾಲಿನ ಎಸ್ಸಿ/ಎಸ್ಟಿ ವಿಶೇಷ ಘಟಕದ ಶಿಷ್ಯವೇತನಕ್ಕೆ 2025 ಹಾಗೂ 2026ನೇ ಸಾಲಿನ 96 ಸಂಶೋಧಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ವಿವಿ ಕೇವಲ 20 ಮಂದಿಗೆ ಮಾತ್ರ ಮಂಜೂರು ಮಾಡಿ ವಿದ್ಯಾರ್ಥಿ ವಿರೋಧಿ ಧೋರಣೆ ತೋರಿದೆ ಎಂದು ಧರಣಿ ನಿರತರು ಆರೋಪಿಸಿದರು.
ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗೆ ವರ್ಷಕ್ಕೆ 23 ಕೋಟಿ ರೂ. ಅನಗತ್ಯವಾಗಿ ನೀಡಲಾಗುತ್ತಿದೆ. ವಿವಿಯ 400 ಕೋಟಿ ರೂ. ಬಜೆಟ್ನಲ್ಲಿ ನಿಯಮಾನುಸಾರ ಶೇ. 24 ಅಂದರೆ 96-97 ಕೋಟಿ ರೂ. ಎಸ್ಸಿ/ಎಸ್ಟಿ ಉಪಯೋಜನೆಗೆ ಮೀಸಲಿಡಬೇಕು. ಆದರೆ ಸಂಶೋಧನೆಗೆ ಯಾವುದೇ ಮೊತ್ತ ಮೀಸಲಿಡದೆ ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪ್ರತಿಭಟಿಸಿದಾಗ ಹಣಕಾಸು ಅಧಿಕಾರಿಗಳು ಸೋಮವಾರ ಆರ್ಡರ್ ಕಾಪಿ ಕೊಡುವುದಾಗಿ ಹೇಳಿದ್ದರು. ಜೂ.1ರಂದು ಕುಲಪತಿಗಳನ್ನು ಭೇಟಿಯಾದಾಗ ಜೂ.10ರವರೆಗೆ ಸಮಯ ಕೇಳಿದ್ದರು. 15 ದಿನ ಕಳೆದರೂ ಸಮಸ್ಯೆ ಬಗೆಹರಿಯಲಿಲ್ಲ. ಈಗ ಕೇಳಿದರೆ ಕುಲಪತಿಗಳು ಸಭೆ ಮಧ್ಯೆ ಎದ್ದು ಹೋಗಿ ದಲಿತ ವಿರೋಧಿ ನಡೆ ತೋರಿದ್ದಾರೆ, ಸಮಸ್ಯೆ ಬಗೆಹರಿಯುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ಧರಣಿಯಲ್ಲಿ ನವೀನ್ ಕೋಳುರು, ರವಿಕುಮಾರ್, ಮೌನ, ದೀಪ, ನವೀನ್ ಅಳಗಂಜಿ, ಸಣ್ಣಮಾದು, ಸಿದ್ಧರಾಜು, ಧೀರಾಜ್, ಮಹೇಶ್, ಶಿವರಾಜು, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
