ಮೈಸೂರು: ಮೈಸೂರಿನ ಕುವೆಂಪುನಗರದ ‘ಎನ್’ ಬ್ಲಾಕ್ ಮುಖ್ಯರಸ್ತೆಯ ‘ಹೋರಿ ಸುಬ್ಬೇಗೌಡ ಬೂಕನಕೆರೆ ಸ್ಮಾರಕ ಬಸ್ ನಿಲ್ದಾಣ’ದಲ್ಲಿ ‘ಆಕಾಶವಾಣಿ’ ಪ್ರಸಾರ ಸೌಲಭ್ಯಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು.
ಆಕಾಶವಾಣಿ ಮೈಸೂರು ಕೇಂದ್ರದ 91ನೇ ವರ್ಷಾಚರಣೆ ಪ್ರಯುಕ್ತ ಕೇಳುಗ ಅಭಿಮಾನಿ ಬೂಕನಕೆರೆ ವಿಜೇಂದ್ರ ಕಲ್ಪಿಸಿರುವ ರೇಡಿಯೊ ವ್ಯವಸ್ಥೆ ಇದಾಗಿದ್ದು, ಸ್ಥಳೀಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
‘ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಕ್ರಮಗಳೇನು ಎಂಬುದನ್ನು ಜನಪ್ರತಿ-ನಿಧಿಗಳಿಗೆ ನಾಗರಿಕರೆ ತಿಳಿಸಿಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಬಸ್ ನಿಲ್ದಾಣಗ-ಳಲ್ಲಿ ಹೊಸ ಮಾದರಿಯ ಸೌಲಭ್ಯ ಒದಗಿಸ-ಲಾಗುವುದು’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಈ ವೇಳೆ ಭರವಸೆ ನೀಡಿದರು.
‘ಸಮುದ್ರತಾ’- ಮೈಸೂರು ಆಕಾಶವಾಣಿ ಯ ಕೇಳುಗರ ಬಳಗದ ಸಕ್ರಿಯ ಸದಸ್ಯರಾಗಿ ರುವ ವಿಜೇಂದ್ರ ತಂದೆಯ ಹೆಸರಿನಲ್ಲಿ ನಿಲ್ದಾಣ ಕಟ್ಟಿಸಿದ್ದರು. ಈಗ ವೈಶಿಷ್ಟ್ಯಪೂರ್ಣ ಕಾರ್ಯ ಮಾಡಿರುವುದು ಅಭಿನಂದನೀಯ’ ಎಂದು ಹೇಳಿದರು.
ವಿಜೇಂದ್ರ ಮಾತನಾಡಿ, ‘ಚೆಲುವಾಂಬ ಉದ್ಯಾನ ಹಾಗೂ ಪುರಭವನದಲ್ಲಿ ರೇಡಿಯೊ ವ್ಯವಸ್ಥೆ ಇತ್ತು. ಅದೀಗ ಇಲ್ಲದಂತಾಗಿದೆ. ಬಸ್ ನಿಲ್ದಾಣದಲ್ಲಿ ಆರಂಭವಾಗಿದ್ದು ಇದೇ ಮೊದಲು. ಸಮಾಜಕ್ಕಾಗಿ ಅಳಿಲು ಸೇವೆಯನ್ನು ಎಲ್ಲರೂ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ತಾಂತ್ರಿಕ ವಿಭಾಗದ ಸಿ.ರಂಜಿತ್, ಕೆಎಸ್ಆರ್ಟಿಸಿ ಡಿಪೊ ವ್ಯವಸ್ಥಾಪಕ ಚೇತನ್, ಲೇಖಕ ಕಾಳಿಹುಂಡಿ ಶಿವಕುಮಾರ್, ಬಳಗದ ಗೋವಿಂದಾಚಾರ್ ಮತ್ತಿತರರು ಹಾಜರಿದ್ದರು.
