ಮೈಸೂರು: ಈಗ ಎಲ್ಲೆಡೆ ಗ್ಯಾರಂಟಿಗಳದ್ದೇ ಸದ್ದು,ಇದಕ್ಕೆ ಮೈಸೂರಿನ ಜೆಎಸ್ಎಸ್ ವಿದ್ಯಾ ಸಂಸ್ಥೆ ಕೂಡಾ ಸೇರ್ಪಡೆಯಾಗಿದೆ.
ಜೆಎಸ್ಎಸ್ ವಿದ್ಯಾ ಸಂಸ್ಥೆ ಯಿಂದ
ಜೀವನಪರ್ಯಂತ ಮೂರು ಗ್ಯಾರಂಟಿ ಕೊಡುವುದಾಗಿ ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ವೆಂಕಟೇಶ್ ತಿಳಿಸಿದ್ದಾರೆ.
ಮೈಸೂರಿನ ಸರಸ್ವತಿಪುರಂನ ಜೆ ಎಸ್ ಎಸ್ ಕಾನೂನು ಕಾಲೇಜಿನಲ್ಲಿ ನಡೆದ ಸಿವಿಲ್ ಜಡ್ಜ್ ಆಗಿ ಆಯ್ಕೆಯಾದವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆ ಎಸ್ ಎಸ್ ಅನ್ನದಾನ, ವಿದ್ಯಾದಾನ, ಉದ್ಯೋಗದಾನದ ಮೂರು ಗ್ಯಾರಂಟಿಯನ್ನು ನೀಡುತ್ತದೆ ಎಂದು ಹೇಳಿದರು.
ಅಷ್ಟೇ ಅಲ್ಲ ಈ ಮೂರು ಗ್ಯಾರಂಟಿಗಳು ಜೀವನ ಪರ್ಯಂತ ಇರುತ್ತದೆ. ಯುವ ವಯಸ್ಸಿನಲ್ಲಿ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾಗಿರುವುದು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿಫಲ ಎಂದು ವೆಂಕಟೇಶ್ ತಿಳಿಸಿದರು.
ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಈ ಸಾಧನೆ ಜೆಎಸ್ಎಸ್ ವಿದ್ಯಾಪೀಠವು ತನ್ನ ಸ್ಥಾಪಕ ತತ್ವಗಳಿಗೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವುದಕ್ಕೆ ಉತ್ತಮ ಉದಾಹರಣೆ ಎಂದು ಲಾಗೈಡ್ ವೆಂಕಟೇಶ್ ಅವರು ಹೇಳಿದರು.
ಇದೇ ವೇಳೆ ಸಿವಿಲ್ ಜಡ್ಜ್ ಆಗಿ ಆಯ್ಕೆಯಾದವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ ಎಸ್. ಪಿ.ಮಂಜುನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್ಟೂರಮಠ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ ಸುರೇಶ್ ಮತ್ತು ಕಾನೂನು ವಿದ್ಯಾರ್ಥಿಗಳು ಸೇರಿ ಹಲವರು ಪಾಲ್ಗೊಂಡಿದ್ದರು.
