ಬೆಂಗಳೂರು: ರಾಜ್ಯ ಮತ್ತು ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವುಗಳ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವರ ಡಾ. ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಮ್ಮಿಕೊಂಡಿದ್ದ ‘ಇ-ಖಾತಾ ಮತ್ತು ನಗರ ಅಭಿವೃದ್ಧಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಮತ್ತು ದೇಶದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವುದು ಎಂಎಸ್ಎಂಇ ವಲಯ, ದೇಶದ ಜಿಡಿಪಿಗೆ ಶೇ. 31 ರಷ್ಟು ಹಾಗೂ ರಫ್ತು ವಲಯಕ್ಕೆ ಶೇ. 45 ರಿಂದ 48 ರಷ್ಟು ಕೊಡುಗೆಯನ್ನು ಈ ವಲಯ ನೀಡುತ್ತಿದೆ ಇದನ್ನು ಯಾವುದೇ ಸರ್ಕಾರ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಯತೀಂದ್ರ ಹೇಳಿದರು.
ಗ್ರಾಮೀಣ ಅಥವಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುವ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆ ಪಾವತಿ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಲಾಗುವುದು. ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಸ್ತಿಗಳನ್ನು ಪಾಲಿಕೆ ವ್ಯಾಪ್ತಿಗೆ ಸಮರ್ಪಕವಾಗಿ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯತೀಂದ್ರ ತಿಳಿಸಿದರು.
ಪಾರದರ್ಶಕತೆ ಹಾಗೂ ತ್ವರಿತ ಸೇವೆಗಾಗಿ ಇ-ಖಾತಾ ವ್ಯವಸ್ಥೆಯನ್ನು ತರಲಾಗಿದೆ. ಪ್ರಸ್ತುತ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಸುಮಾರು 20.26 ಲಕ್ಷ ಆಸ್ತಿಗಳ ಪೈಕಿ ಶೇ. 40 ರಷ್ಟು ಆಸ್ತಿಗಳಿಗೆ ಮಾತ್ರ ಇ-ಖಾತಾ ನೀಡಲಾಗಿದೆ. ತಾಂತ್ರಿಕ ತೊಂದರೆಗಳು ಮತ್ತು ಕಾಗುಣಿತ ದೋಷಗಳ ತಿದ್ದುಪಡಿಗೆ ಈಗಾಗಲೇ ಶೇ. 10 ರಷ್ಟು ವಿನಾಯಿತಿ ನೀಡಲಾಗಿದ್ದು, ಇದನ್ನು ಇನ್ನಷ್ಟು ಸರಳಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಕೈಗಾರಿಕಾ ಪ್ರದೇಶಗಳಿಗೆ ಟ್ಯಾಂಕರ್ ಮುಕ್ತ ನೀರು ಸರಬರಾಜು ಮತ್ತು ಒಳಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಆದ್ಯತೆ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.
ಉದ್ಯಮಿಗಳ ಸಮಸ್ಯೆಗಳಿಗೆ ಕೇವಲ ಭರವಸೆ ನೀಡದೆ, ಎಫ್.ಕೆ.ಸಿ.ಸಿ.ಐ. ನೀಡುವ ನಿರ್ದಿಷ್ಟ ಸಮಸ್ಯೆಗಳ ಲಿಖಿತ ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಂಬರುವ ದಿನಗಳಲ್ಲೂ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕ ಮತ್ತು ಸಮಾಲೋಚನೆ ನಡೆಸುವ ಮೂಲಕ ಕೈಗಾರಿಕಾ ವಲಯದ ಏಳಿಗೆಗೆ ಶ್ರಮಿಸುವುದಾಗಿ ಡಾ.ಯತೀಂದ್ರ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ.ಕಾವೇರಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಉಮಾ ರೆಡ್ಡಿ, ನಿಕಟಪೂರ್ವ ಅಧ್ಯಕ್ಷರಾದ ಆರ್. ಶಿವಕುಮಾರ್, ಹಿರಿಯ ಉಪಾಧ್ಯಕ್ಷರಾದ ಸಾಯಿರಾಂ ಪ್ರಸಾದ್, ಉಪಾಧ್ಯಕ್ಷರಾದ ಶಶಿಧರ್, ಅರವಿಂದ್ ಬುರ್ಜಿ, ತಲ್ಲಂ ವೆಂಕಟೇಶ್, ಸುಗ್ನೇನ್ ಹಿರೇಮಠ್ ಸೇರಿದಂತೆ FKCCIಯ ಪದಾಧಿಕಾರಿಗಳು, ವಿವಿಧ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
