ಯಳಂದೂರು: ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಅಭಿಮಾನಿ ಬಳಗ ಒತ್ತಾಯಿಸಿದೆ.
ಯಳಂದೂರು ತಾಲೂಕಿನ ಎಚ್.ಸಿ. ಮಹದೇವಪ್ಪ ಅಭಿಮಾನಿ ಬಳಗ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷರಾದ ವಡಗೆರೆ ಡಾ.ಮಹಾದೇವ ಅವರು ಈ ಒತ್ತಾಯ ಮಾಡಿದರು.
ಕರ್ನಾಟಕ ರಾಜ್ಯದಲ್ಲಿ ದಲಿತ ರಾಜಕೀಯ ನಾಯಕರ ಸಾಲಿನಲ್ಲಿ ಮಹದೇವಪ್ಪನವರು ಪ್ರಮುಖರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.ಆದರೆ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಗಳ ಬದಲಾವಣೆಯ ಸಂದರ್ಭ ಸಚಿವ ಸಂಪುಟ ಪುನರ್ ನಿರ್ಮಾಣವಾದಾಗಿನಿಂದಲೂ ಮಹಾದೇವಪ್ಪನವರನ್ನು ಕಡೆಗಣಿಸಿ ಅವರಿಗೆ ಮೊದಲನೆಯ ಸಂಪುಟದಲ್ಲಿ ಯಾವುದೇ ಪ್ರಮುಖ ಖಾತೆಯನ್ನು ನೀಡದೆ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಗಡಿನಾಡು ಚಾಮರಾಜನಗರ ಜಿಲ್ಲೆಯಿಂದ ಕರ್ನಾಟಕದ ತುತ್ತತುದಿ ಬೀದರ್ ವರೆಗೂ ಎಚ್.ಸಿ. ಮಹದೇವಪ್ಪನವರ ಅಭಿಮಾನಿಗಳು ಮತ್ತು ಅವರ ರಾಜಕೀಯ ಪ್ರೇರಿತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದು ಅವರೆಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು ದಲಿತ ನಾಯಕರ ಬೆಂಬಲಿಸುವ ವಿಷಯದಲ್ಲಿ ಯಾವುದೇ ಹಿಂಜರಿಕೆ ಮಾಡುವವರಲ್ಲ ಎಂದು ಹೇಳಿದರು.
ಒಂದು ವೇಳೆ ಮುಂದಿನ ದಿನಗಳಲ್ಲಿ ಎಚ್.ಸಿ. ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಹೋದಲ್ಲಿ ಹಳೆ ಮೈಸೂರು ಭಾಗದ ಕಾಂಗ್ರೆಸ್ ಕರ್ತರು ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿಮಾನಿಗಳ ಬೆಂಬಲದಿಂದ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಮತ್ತು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತದೆ ಇದರಿಂದ ಪಕ್ಷದಲ್ಲಿ ದೊಡ್ಡ ಮಟ್ಟದ ಹಿನ್ನೆಲೆಯನ್ನು ಅನುಭವಿಸುವ ಪರಿಸ್ಥಿತಿ ಬರುತ್ತದೆ ಎಂದು ಡಾ.ವಡಗೆರೆ ಡಾ.ಮಹಾದೇವ ಎಚ್ಚರಿಕೆ ನೀಡಿದರು.
ಮದ್ದೂರು ಚಕ್ರವರ್ತಿ ಹಾಗೂ ಇರಸವಾಡಿ ಜನಾರ್ದನ್ ಮಾತನಾಡಿ ಹಳೇ ಮೈಸೂರು ಭಾಗದಲ್ಲಿ ರಾಜಕೀಯ ಮುಂಚೂಣಿ ನಾಯಕರಾಗಿರುವ ಹೆಚ್.ಸಿ ಮಹದೇವಪ್ಪನವರು ನಮ್ಮೆಲ್ಲರ ರಾಜಕೀಯ ಗುರುಗಳಾಗಿದ್ದು, ಮುಖ್ಯಮಂತ್ರಿ
ಡಿ.ಕೆ ಶಿವಕುಮಾರ್ ಅವರಿಗೆ ನಮ್ಮ ಹಿಂದುಳಿದ ದಲಿತ ವರ್ಗದ ರಾಜಕೀಯ ನಾಯಕರ ಮೇಲೆ ಒಲವಿದ್ದರೆ ಹಾಗೂ ನೀವು ದ್ವೇಷ ರಾಜಕಾರಣವನ್ನು ಮಾಡುವವರಲ್ಲದಿದ್ದರೆ ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ರಾಜ್ಯದ ಉನ್ನತ ಸಚಿವ ಸ್ಥಾನವಾದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಮಹದೇವಪ್ಪನವರಿಗೆ ಹಲವು ಬಾರಿ ಮಾರ್ಮಿಕವಾಗಿ ಹೀಯಾ
ಳಿಸಿ ಮಾತನಾಡಿರುವುದು ಹಾಗೂ ಹೊಟ್ಟೆಕಿಚ್ಚಿನ ಸಂದರ್ಭಗಳನ್ನು ರಾಜ್ಯದ ದಲಿತ ನಾಯಕರು ರಾಜಕೀಯ ಮುಖಂಡರು ತೀಕ್ಷ್ಣವಾಗಿ ಗಮನಿಸಿದ್ದಾರೆ, ಮುಂದಿನ ಸಚಿವ ಸಂಪುಟದ ಸಂದರ್ಭದಲ್ಲಿ ಕಡ್ಡಾಯವಾಗಿ ಮಹದೇವಪ್ಪನವರಿಗೆ ಉನ್ನತ ಸಚಿವ ಸ್ಥಾನ ನೀಡಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ ದಲಿತ ಜನರ ನಂಬಿಕೆಗೆ ಹಿನ್ನಡೆಯಾಗದಂತೆ ಸ್ಥಾನಮಾನವನ್ನು ನೀಡಬೇಕೆಂದು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದರು.
ನಾರಾಯಣಸ್ವಾಮಿ, ವೈಕಿ ಮೊಳೆ ಪರಶಿವಮೂರ್ತಿ, ಚಂದ್ರು ಗೌಡಳ್ಳಿ, ರವಿಕುಮಾರ್ ಸುರೇಶ್, ಮರಿಸ್ವಾಮಿ, ಕುಮಾರ್, ಶಿವಪ್ರಕಾಶ್, ರಘು, ಶ್ರೀಕಂಠ, ಹರೀಶ್ ಹೊನ್ನೂರು,ಮಹದೇವಸ್ವಾಮಿ,ರವಿ, ಆನಂದು,ಬಸವಣ್ಣ, ಮಲ್ಲಿಕಾರ್ಜುನ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಎಚ್ ಸಿ ಮಹದೇವಪ್ಪನವರ ಅಭಿಮಾನಿ ಬಳಗದ ಸಂಘದ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಎಲ್ಲಾ ಅಭಿಮಾನಿಗಳು ಹಾಜರಿದ್ದರು.
