ಮೈಸೂರು: ಕನ್ನಡ ನೆಲದ ಅಧಿದೇವತೆ, ತಾಯಿ ಭುವನೇಶ್ವರಿಯನ್ನು ಕರ್ನಾಟಕ ರಾಜ್ಯದ ಅಧಿಕೃತ ‘ನಾಡದೇವತೆ’ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು,ಕೋಟಿ ಕೋಟಿ ಕನ್ನಡಿಗರ ಆರಾಧ್ಯ ದೈವವಾಗಿರುವ ಭುವನೇಶ್ವರಿ ದೇವಿಯನ್ನು ನಾವು ಶತಮಾನಗಳಿಂದ ನಾಡದೇವತೆ ಎಂದು ಪೂಜಿಸುತ್ತಾ ಬಂದಿದ್ದೇವೆ.
ಆದರೆ, ಸರ್ಕಾರಿ ದಾಖಲೆಗಳಲ್ಲಿ ಅಥವಾ ಅಧಿಕೃತವಾಗಿ ಭುವನೇಶ್ವರಿ ದೇವಿಗೆ ‘ನಾಡದೇವತೆ’ ಎಂಬ ಕಾನೂನಾತ್ಮಕ ಸ್ಥಾನಮಾನ ಸಿಕ್ಕಿಲ್ಲ,ಇದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ, ಕೇವಲ ಭಾಷಣಗಳಲ್ಲಿ ಮತ್ತು ಉತ್ಸವಗಳಲ್ಲಿ ಮಾತ್ರ ತಾಯಿಯನ್ನು ಸ್ಮರಿಸಿದರೆ ಸಾಲದು, ಅದಕ್ಕೆ ಸಾಂವಿಧಾನಿಕ ಮತ್ತು ಅಧಿಕೃತ ಮಾನ್ಯತೆ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಸುಗ್ರೀವಾಜ್ಞೆ ಹೊರಡಿಸಿ ಭುವನೇಶ್ವರಿ ದೇವಿಯನ್ನು ‘ಕರ್ನಾಟಕದ ಅಧಿಕೃತ ನಾಡದೇವತೆ’ ಎಂದು ಘೋಷಿಸಬೇಕು,
ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ನಾಡದೇವಿ ಭುವನೇಶ್ವರಿಯ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು,
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು,
ಮುಂದಿನ ದಿನಗಳಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಕನ್ನಡ ಕ್ರಾಂತಿದಳದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತೇಜಸ್ವಿ ನಾಗಲಿಂಗಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭುವನೇಶ್ವರಿ ದೇವಿಯ ಆರಾಧನೆಗೆ ವಿಜಯನಗರ ಸಾಮ್ರಾಜ್ಯ ಮತ್ತು ಕದಂಬರ ಕಾಲದ ಇತಿಹಾಸವಿದೆ. ಹಂಪಿಯ ಭುವನೇಶ್ವರಿ ದೇವಸ್ಥಾನವು ಇದಕ್ಕೆ ಜೀವಂತ ಸಾಕ್ಷಿ. ಕನ್ನಡಿಗರ ಅಸ್ಮಿತೆಯ ಸಾಕಾರ ರೂಪವೇ ತಾಯಿ ಭುವನೇಶ್ವರಿ.
ಪ್ರಸ್ತುತ ನಮ್ಮಲ್ಲಿ ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ನಾಡಗೀತೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ, ‘ನಾಡದೇವಿ’ ಯಾರು ಎಂಬ ಗೊಂದಲಕ್ಕೆ ಮತ್ತು ಅಧಿಕೃತ ಘೋಷಣೆಗೆ ಸರ್ಕಾರಿ ಮಟ್ಟದಲ್ಲಿ ಇನ್ನು ಸ್ಪಷ್ಟವಾದ ಲಿಖಿತ ಆದೇಶದ ಕೊರತೆಯಿದೆ. ಈ ಕಾನೂನಾತ್ಮಕ ಶೂನ್ಯತೆಯನ್ನು ತುಂಬುವುದು ಈ ಬೇಡಿಕೆಯ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕದಾದ್ಯಂತ ಎಲ್ಲೂ ಭೇದಭಾವವಿಲ್ಲದೆ ಒಪ್ಪಿಕೊಳ್ಳುವ ಏಕೈಕ ಮಾತೃ ಸ್ವರೂಪ ಭುವನೇಶ್ವರಿ. ಹಾಗಾಗಿ, ಈ ಘೋಷಣೆಯು ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಮತ್ತಷ್ಟು ಒಂದುಗೂಡಿಸುತ್ತದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
