ಮೈಸೂರು: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕೇವಲ ಕಾನೂನು ಹಾಗೂ ಸೇವಾ ನಿಯಮಗಳ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುವುದಕ್ಕೆ ಸೀಮಿತವಾಗದೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಾಯುಕ್ತ ಸಂಸ್ಥೆ ಸ್ಥಾಪನೆಯಾಗಿ ಸುಮಾರು ನಾಲ್ಕು ದಶಕಗಳು ಕಳೆದಿದ್ದರೂ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಇಂದಿಗೂ ಭ್ರಷ್ಟಾಚಾರ ಸಮಾಜದಲ್ಲಿ ಮುಂದುವರಿದಿರುವುದು ಕಳವಳಕಾರಿ ಸಂಗತಿಯಾಗಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬುದು ಆತಂಕಕಾರಿ ಸಂಗತಿ. ಈ ಪರಿಸ್ಥಿತಿಯಿಂದ ಹೊರಬರಲು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆ ಹೆಚ್ಚಾಗಬೇಕು. ಭ್ರಷ್ಟಾಚಾರವನ್ನು ತಡೆಗಟ್ಟುವುದು, ಸಾರ್ವಜನಿಕರ ನೆಮ್ಮದಿ ಕಾಪಾಡುವುದು ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪ್ರತಿವರ್ಷ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಜಾಗೃತಿ ಅರಿವು ಸಪ್ತಾಹವನ್ನು ಆಚರಿಸಲಾಗುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31ರಂದು ಅವರ ಪ್ರಾಮಾಣಿಕತೆ, ನಿಷ್ಠೆ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವರ್ಷದ ಜಾಗೃತಿ ಸಪ್ತಾಹದ ಧ್ಯೇಯವಾಕ್ಯ ‘ಸಮೃದ್ಧಿಗಾಗಿ ಪ್ರಾಮಾಣಿಕತೆ’ ಎಂಬುದಾಗಿದೆ. ಪ್ರಾಮಾಣಿಕತೆ ಎಂದರೆ ಕೇವಲ ವೈಯಕ್ತಿಕ ನಿಷ್ಠೆಯಲ್ಲ. ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸುವುದೂ ಪ್ರಾಮಾಣಿಕತೆಯ ಭಾಗವಾಗಿದೆ ಎಂದು ಹೇಳಿದರು.
ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮಯಪಾಲನೆ ಉತ್ತಮ ಆಡಳಿತ ವ್ಯವಸ್ಥೆಯ ಪ್ರಮುಖ ಮೌಲ್ಯಗಳಾಗಿವೆ. ನಮಗೆ ವಹಿಸಿರುವ ಜವಾಬ್ದಾರಿಯನ್ನು ಅರಿತು, ಅಗತ್ಯವಿದ್ದಾಗ ಹೆಚ್ಚುವರಿ ಸಮಯವನ್ನೂ ಕೆಲಸಕ್ಕಾಗಿ ಮೀಸಲಿಟ್ಟು ಕರ್ತವ್ಯ ಪೂರ್ಣಗೊಳಿಸುವುದು ನಿಜವಾದ ಮೌಲ್ಯಾಧಾರಿತ ಸಮಯಪಾಲನೆಯಾಗಿದೆ ಎಂದು ಫಣೀಂದ್ರ ಹೇಳಿದರು.
ಕೆಲಸದ ಅವಧಿಯನ್ನು ಕೇವಲ ಗಡಿಯಾರದ ಸಮಯಕ್ಕೆ ಸೀಮಿತಗೊಳಿಸದೆ, ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕೆಲಸದ ಪ್ರಮಾಣ, ಅದರ ಮಹತ್ವ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು. ಕೆಲಸದಲ್ಲಿ ವಸ್ತುನಿಷ್ಠತೆ, ಪ್ರಾಮಾಣಿಕತೆ ಮತ್ತು ಬದ್ಧತೆ ಇರಬೇಕು ಎಂದು ತಿಳಿಸಿದರು.
ಪ್ರಸ್ತುತ ಒಂದು ವರ್ಷದಲ್ಲಿ ಸುಮಾರು 30 ಸಾವಿರ ಪ್ರಕರಣಗಳು ಬಂದಿದ್ದು, ಅವುಗಳಲ್ಲಿ ಸುಮಾರು 22 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ದಿನದ 24 ಗಂಟೆಗಳ ಅವಧಿ ಬದಲಾಗಿಲ್ಲ. ಲಭ್ಯವಿರುವ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತದೆ ಉಪ ಲೋಕಾಯುಕ್ತರು ಹೇಳಿದರು.
ಭಾರತದ ಸಂವಿಧಾನವು ಎಲ್ಲರಿಗೂ ಸಮಪಾಲು, ಸಮಬಾಳು ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಮಹತ್ತರ ಆಶಯ ಹೊಂದಿದೆ. ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ಜೀವನ ಒದಗಿಸುವುದು ಸಂವಿಧಾನದ ಮೂಲ ಉದ್ದೇಶವಾಗಿದೆ. ಈ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿವಿಧ ಕಾನೂನುಗಳನ್ನು ರೂಪಿಸಿ, ಇಲಾಖೆಗಳ ಮೂಲಕ ಜವಾಬ್ದಾರಿಗಳನ್ನು ಹಂಚಿಕೆ ಮಾಡಿವೆ.
ದೇಶದ ಗಡಿಗಳನ್ನು ಸೈನಿಕರು ರಕ್ಷಿಸುವಂತೆ, ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮಹತ್ವದ ಕಾರ್ಯವನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತದೆ. ಸಮಾಜದಲ್ಲಿನ ಸಂಘರ್ಷಗಳನ್ನು ನಿಯಂತ್ರಿಸುವುದು, ಜನರ ಜೀವ ಮತ್ತು ಆಸ್ತಿಗೆ ರಕ್ಷಣೆ ನೀಡುವುದು ಹಾಗೂ ನಾಗರಿಕರ ಹಕ್ಕುಬಾಧ್ಯತೆಗಳನ್ನು ಸಂರಕ್ಷಿಸುವುದು ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ. ಅದೇ ರೀತಿ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಲ್ಯಾಧಾರಿತ ಜೀವನ ನಡೆಸಬೇಕು. ಇದು ವೈಯಕ್ತಿಕ ಜೀವನಕ್ಕೆ ಮಾತ್ರವಲ್ಲದೆ ಸಮಾಜ ಮತ್ತು ಆಡಳಿತ ವ್ಯವಸ್ಥೆಯ ಸುಧಾರಣೆಗೂ ಸಹಕಾರಿಯಾಗುತ್ತದೆ ಎಂದು ತಿಳಿಹೇಳಿದರು.
ಭಾರತದ ಸ್ವಾತಂತ್ರ್ಯ ಹಾಗೂ ಭಾರತೀಯರನ್ನು ಶೋಷಣೆ, ದಬ್ಬಾಳಿಕೆ ಮತ್ತು ತಾರತಮ್ಯದಿಂದ ಮುಕ್ತಗೊಳಿಸುವುದು ಗಾಂಧೀಜಿಯವರ ಪ್ರಮುಖ ಕನಸುಗಳಾಗಿದ್ದವು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಆಡಳಿತ ವ್ಯವಸ್ಥೆ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಸರ್ಕಾರಿ ನೌಕರರೂ ಮೌಲ್ಯಾಧಾರಿತ ಜೀವನ ಮತ್ತು ಕರ್ತವ್ಯನಿಷ್ಠೆಯನ್ನು ಅಳವಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರ ಮುಕ್ತ ಹಾಗೂ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಫಣೀಂದ್ರ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್, ಮೈಸೂರು ಜಿಲ್ಲಾ ಲೋಕಾಯುಕ್ತ ಅಧೀಕ್ಷಕರಾದ ಟಿ ಜೆ ಉದೇಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
