ಮೈಸೂರು: ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮೇಲೆ ಬಲವಂತವಾಗಿ ಮಲಯಾಳಂ ಭಾಷೆ ಹೇರಲು ಹೊರಟಿರುವ ಕೇರಳ ಸರಕಾರದ ಕ್ರಮವನ್ನು ಖಂಡಿಸಿ ಭಾನಯವಾರ ಕರ್ನಾಟಕ ಸೇನಾ ಪಡೆ ಸದಸ್ಯರು ಮೈಸೂರಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಚುನಾವಣೆ ಸಮಯದಲ್ಲಿ ಮತಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳಿಗಳನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ಕೇರಳದ ಗಡಿ ಪ್ರದೇಶವಾದ ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಕನ್ನಡ ಶಾಲೆಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಿದ್ದರೂ ಮಲಯಾಳಂ ಭಾಷಾ ಮಸೂದೆ 2025 ನ್ನು ಕೇರಳ ಸರ್ಕಾರ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ಖಂಡಿಸಿದರು.
ಮಲಯಾಳಂ ಭಾಷಾ ಮಸೂದೆ 2025 ಸಂಪೂರ್ಣ ಅಸಂವಿಧಾನಿಕವಾಗಿದೆ. ಈ ಮಸೂದೆಯಿಂದ ಈಗ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಕನ್ನಡ ಮಾಧ್ಯಮ ಮಕ್ಕಳು ಇಷ್ಟವಿಲ್ಲದಿದ್ದರೂ ಮಲಯಾಳಂ ಕಲಿಯಬೇಕಾಗುತ್ತದೆ. ಭಾಷಾ ಸ್ವಾತಂತ್ರ್ಯದ ಮೇಲೆ ಗದಾ ಪ್ರಹಾರ ಮಾಡಿದಂತಾಗುತ್ತದೆ ಹಾಗೂ ಇದು ಭಾಷೆಯ ಹಕ್ಕಿನ ಉಲ್ಲಂಘನೆಯಾಗಲಿದೆ. ಇಂತಹ ಕಾನೂನು ಜಾರಿಗೆ ಬಂದರೆ ಕೇರಳದ ಗಡಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಮಹಾಜನ್ ವರದಿ ಪ್ರಕಾರ ಕಾಸರಗೋಡು ಕರ್ನಾಟಕಕ್ಕೆ ಸೇರುತ್ತದೆ. ಕಾಸರಗೋಡು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ, ಭಾವನಾತ್ಮಕವಾಗಿ ಕರ್ನಾಟಕಕ್ಕೆ ಸೇರಿದ್ದಾಗಿದೆ. ಅವರ ಹಿತವನ್ನು ರಕ್ಷಿಸುವುದು ನಮ್ಮ ಕರ್ನಾಟಕ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.
ಕೇರಳ ಸರ್ಕಾರ ಮೊಂಡುತನ ಪ್ರದರ್ಶಿಸಿ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ, ಕನ್ನಡಿಗರು ಇದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದೇವೆ. ಜೊತೆಗೆ ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವ ರೀತಿಯ ಬೆಂಬಲವನ್ನು ನೀಡಲಿದ್ದೇವೆ ಎಂದು ಕಡಕ್ಕಾಗಿ ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಸುರೇಶ್ ಗೋಲ್ಡ್, ಪ್ರಭುಶಂಕರ್, ಪ್ರಜೀಶ್, ಡಾ . ಶಾಂತರಾಜೇಅರಸ್, ಕೃಷ್ಣಪ್ಪ, ಡಾ . ಮೊಗಣ್ಣಾಚಾರ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಹನುಮಂತೇಗೌಡ, ಮಂಜುಳ, ಭಾಗ್ಯಮ್ಮ, ಗಿರೀಶ್ ಹೆಚ್, ಮಧುವನ ಚಂದ್ರು, ಹೊನ್ನೇಗೌಡ, ಜ್ಯೋತಿ, ನಂದಕುಮಾರ್, ದರ್ಶನ್ ಗೌಡ, ಪ್ರದೀಪ್, ಸುಜಾತ, ತಾಯೂರು ಗಣೇಶ್, ಅಶೋಕ್, ಪ್ರಭಾಕರ್, ಶಿವರಾಂ, ರಘು ಆಚಾರ್, ಪರಿಸರ ಚಂದ್ರು , ನಾರಾಯಣಗೌಡ, ರಘು ಅರಸ್, ಕುಮಾರ್, ಗಣೇಶ್ ಪ್ರಸಾದ್,ಚಂದ್ರಶೇಖರ್, ಬಸವರಾಜು, ತ್ಯಾಗರಾಜ್, ರವೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
